ತಲೆ ಇಟ್ಕೋ
ಕಲ್ಪನೆ - ಶ್ರೀವತ್ಸ ಪ್ರಹಲ್ಲಾದ
ಸುಪುತ್ರ
ಕುಮಾರನಿಗೆ ನಿನ್ನ “ತೀರ್ಥರೂಪರು” ಮಾಡುವ
ಆಶೀರ್ವಾದಗಳು.
ಇಲ್ಲಿ
ಎಲ್ಲವು ಸೌಖ್ಯ, ಎಲ್ಲರು
ಕ್ಷೇಮ. ದಿನಕ್ಕೊಮ್ಮೆ ಅರ್ಧಗಂಟೆಯಾದರೂ ನಾನು
ನನ್ನ ಸೊಸೆಯ ಬಳಿ
ಮಾತನಾಡುವ ಕಾರಣ ಅಲ್ಲಿಯೂ
ಒಂದು ರೀತಿಯಲ್ಲಿ ಎಲ್ಲರು
ಕ್ಷೇಮವೆಂದು ತಿಳಿದಿದ್ದೀನಿ.
ಆಗ್ಗೋಮ್ಮೆ-ಈಗ್ಗೊಮ್ಮೆ ನೀನು ನನಗೆ
ಕರೆ ಮಾಡಿದಾಗಲೆಲ್ಲ, "ನೀನು
ಮಾತ್ರೆಗಳ್ನ ಸರಿಯಾಗಿ ತೊಗೊಂಡ್ತಾ
ಇದ್ಯಾ? ಪ್ರತಿದಿನ ವಾಕಿಂಗು-ವ್ಯಾಯಾಮ ಮಾಡ್ತಾಯಿದ್ಯಾ? ಬಜ್ಜಿ-ಬೋಂಡ ತಿಂತಿಲ್ಲ ತಾನೇ?" ಅಂತ
ಎತ್ತುಚ್ಚೆ ಹುಯ್ಯೋ ತರ
ಹತ್ತಾರು ಪ್ರಶ್ನೆಗಳ್ನ ಕೇಳ್ತ್ಯಾ
... ನಿನ್ನ್ ಬಗ್ಗೆ ವಿಚಾರಸೋಣ
ಅನ್ನುವಷ್ಟರಲ್ಲಿ ಮೀಟಿಂಗು-ಕಾಲು
ಅಂತ ನೆಪ ಹೇಳಿ
ಫೋನ್ ಇಡ್ತ್ಯ. ಅದಿಕ್ಕೆ,
ನಿಮ್ಮಮ್ಮ ಮಾಡಿದ ಬಿಸಿ-ಬಿಸಿ ಚಹಾ ಹೀರುತ್ತ,
ಸಾವಕಾಶವಾಗಿ ಕೂತು ಈ
ಪತ್ರ ನಿನಗೆ ಬರೀತಾಯಿದ್ದೀನಿ. ಫೋನ್
ಸಂದೇಶಗಳಷ್ಟು ವೇಗವಿಲ್ಲದಿದ್ದರು, ಈ
ಪತ್ರಗಳಲ್ಲಿ ನನ್ನ ಏಕೋಕ್ತಿಗಳಿಗೆ ಆಸ್ಪದವಿದೆ
ಹಾಗೆಯೇ ಈ ಪತ್ರಕ್ಕೆ
'ಬ್ಯಾಟರಿ ಲೊ' ಕೂಡ
ಆಗುವುದಿಲ್ಲ!
ಸರಿ,
ಸುತ್ತಿ-ಬಳಸಿ ಮಾತಾಡದೆ
ನೇರ ವಿಷಯಕ್ಕೆ ಬರ್ತೀನಿ,
ಆದ್ರೆ ಈ ಪತ್ರ
ಓದಿದಮೇಲೆ ನನ್ನ ಸೊಸೆಗೆ
ನೀನು ಅಂದು-ಆಡಿ
ಮಾಡೋದಿಲ್ಲ ಅಂತ ನನಗೆ
ಮೊದ್ಲು ಮಾತ್ಕೊಡು!
ಅಲ್ವೋ,
ನೀನ್ ಚಿಕ್ಕವನಾಗಿದ್ದಾಗ ಕೆಲವೊಮ್ಮೆ
ನನಗೇ ಸಂಕೋಚವಾಗೋ ವಿಷಯಗಳ್ನ
ನನ್ನ್ ಹತ್ರ ಬಂದು
ಮುಚ್ಚು-ಮರೆಯಿಲ್ದೇ ಹಂಚ್ಕೊಂಡಿದ್ದೀಯ, ಈಗ್
ಯಾಕೆ ಕಂದ ಹೀಗ್
ಮಾಡ್ತಾಯಿದ್ದೀಯ?
ನನಗೆ
ನಿಮ್ಮಮ್ಮ ದಿನ ತುಪ್ಪದ್
ದೀಪ ಹಚ್ಚಕ್ಕೆ ಶುರು
ಮಾಡಿದಾಗ್ಲೇ ಅನ್ನಿಸ್ತು, ಏನೋ
ತೊಂದ್ರೆ ಇದೆ ಅಂತ,
ಆದ್ರೆ ನಿಮ್ಮಮ್ಮ ಒಬ್ರಿಗೆ
ಮಾತ್ ಕೊಟ್ಟಮೇಲೆ ಜಪ್ಪಯ್ಯ
ಅಂದ್ರು ಮುರಿಯಲ್ಲ. ನಾನ್
ನನ್ನ್ ಸೊಸೆಗೆ ಗಧರಿಸಬೇಕಾಯ್ತು.. ಪಾಪ
ಅವಳು ಅತ್ಕೊಂಡ್ ಎಲ್ಲಾ
ಹೇಳಿದ್ಲು.
ಅಲ್ವೋ,
ನಿಂಗೆ ಕೆಲ್ಸ ಹೋಗಿದೆ
ಅನ್ನೋ ವಿಷ್ಯ ನನಗೆ
ಹೇಳಿದ್ರೆ ಮತ್ತೆ ಇನ್ನೊಮ್ಮೆ
ನನಗೆ ಹಾರ್ಟ್-ಅಟ್ಯಾಕ್
ಆಗತ್ತೆ ಅಂದ್ಕೊಂಡಿದ್ಯ?
ಅಯ್ಯೋ
ಪೆದ್ಮುಂಡೇದೆ...ನಾನ್ ನಿಮ್ಮಪ್ಪ
ಕಣೋ!! ಗಟ್ಟಿ ಜೀವ;
ಹಾಗೆಲ್ಲ ನಂಗೇನು ಆಗಲ್ಲ.
ಏನೋ, ಮುಂಚೆ ಅಂಗಡಿನಲ್ಲೆ
ಕೂತು-ಕೂತು ಹಾಳು-ಮೂಳು ತಿಂದು-ತಿಂದು
ಬೋಜ್ಜ್ ಬೆಳೆಸ್ಕೊಂಡು ಹಾರ್ಟ್-ಅಟ್ಯಾಕ್ ಆಗಿತ್ತಷ್ಟೆ. ಈಗ
ವ್ಯಾಯಾಮವೆಲ್ಲ ಮಾಡ್ಕೊಂಡು ಒಳ್ಳೆ
ಧಾರಾಸಿಂಗ್ ತರ ಗಟ್ಟ್-ಮುಟ್ಟಾಗಿದ್ದೀನಿ.
ನೀನು
ನಾಕನೇ ಕ್ಲಾಸೊ ಐದನೇ
ಕ್ಲಾಸಲ್ಲೊ ಇದ್ದೆ. ಆಗ
ನಿಮ್ಮಮ್ಮನ ಸೆರಗಿನ ಪಿನ್ನ
ತೊಗೊಂಡು ಗಂಟ್ಗಟ್ಲೆ ಬಳಪದ
ಕಲ್ನ ಕೊರ್ದು-ಕೊರ್ದು
ಚಲಿಸೊ ಟ್ರಾಕ್ಟರ್ರೇ ಮಾಡಿದ್ದೆ!
ಅಷ್ಟ್ ಸಾಲ್ದು ಅಂತ
ಅದಿಕ್ಕೆ ಮೇಣ, ಸಾಬೂನು,
ರಬ್ಬರ್ಬ್ಯಾಂಡ್ಸ್, ಸ್ಪ್ರಿಂಗು ಎಲ್ಲ
ಹಾಕಿ ಅದನ್ನ ಎಳದ್
ಬಿಟ್ರೆ ತಾನಾಗ್ತಾನೆ ಎಷ್ಟೋ
ದೂರ ಹೋಗೋದು; ಅಷ್ಟ್
ಚೆನ್ನಾಗ್ ಮಾಡಿದ್ದೆ! ಹಾಂ..
ಆಮೇಲೆ ನಮ್ಮ್ ಹಿತ್ತಲಿದ್ದ
ಸೀಬೆ ಮರದ ಮೇಲೆ
ಹಳೆ ಹಲಿಗೆಗಳ್ನ ಬೆಂಚ್ಗಳ
ತರ ಹಾಕ್ಕೊಂಡು ಅದ್ರ್
ಮೇಲೆ ಕೂತ್ಕೊಂಡು ನಿನ್ನ್
ಓದ್ಕೊಂಡ್ತಾಯಿದ್ದೆ. ನಾನ್ ನಿಂಗ್
ಬೈದಾಗ್ಲೆಲ್ಲ ಮುನಿಸ್ಕೊಂಡು ಅಲ್ಲೇ
ಕೂತಿರ್ತಾಯಿದ್ದೆ. ಆ ಹಲಿಗೆಗಳ್ನ
ಲ್ಯಟ್ರಿನ್ ಬಾಗಿಲಿಗೆ ಹಾಕ್ಸ್ಬೇಕು
ಅಂತ ಎತ್ತಿಟ್ಟಿದ್ದೆ, ನೀನು
ಎರಡೇ ದಿನದಲ್ಲಿ ಅದನ್ನ
'ಪಟ್ಟ್' ಅಂತ ತೊಗೊಂಡು
ಕತ್ತರಿಸಾಕಿದ್ದೆ. ನಿಂಗೆ ಭಾನುವಾರ
ರಜೆ ಬಂತು ಅಂದ್ರೆ
ನಮೆಗೆಲ್ಲ ಸರ್ಕಸ್ಸು; ಎಲ್-ಯಾವಾಗ ಎನ್ನ ಕತರ್ಸಿ
ಇನ್ನೇನ್ ಮಾಡ್ತಾನೋ ಅನ್ನೋ
ಭಯ. ನಂಗೊ.. ಶನಿವಾರ-ಭಾನುವಾರದ ಹೊತ್ತೇ ನಮ್ಮ್
ಅಂಗಡಿನಲ್ಲಿ ವ್ಯಾಪಾರ ಜಾಸ್ತಿ
ಆಗೋದು. ಒಟ್ನಲ್ಲಿ, ನೀನು
ಒಂದ್ ನಿಮಿಷ ಸುಮ್ನೆ
ಕೂತೌನಲ್ಲ..
ಆದ್ರೆ,
ಈಗ್ ಯಾಕ್ ಕಂದ
ಯಾವಾಗ್ಲು ಮುಸ್ಕ ಹಾಕ್ಕೊಂಡೆ
ಸದಾ ಮಲ್ಗಿರ್ತ್ಯಂತೆ? ಸುಮ್ನಿರುವಂತ ಜಾಯ್ಮಾನ
ಅಲ್ಲ ಕಂದ ನಿಂದು.
ನಿನ್ನ್ ಚುರುಕ್ ಬುದ್ದಿ
ಬಗ್ಗೆ ಯಾವಾಗ್ಲೂ ನಿಮ್ಮಮ್ಮನ
ಹತ್ರ ಕೊಂಡಾಡ್ತಾಯಿದ್ದೆ; ನೀನು
ಯಾವಾಗ್ಲೂ ಚುರುಕಾಗೆ ಇರ್ಬೇಕು.
ಅಲ್ವೋ
ಕಂದ, 'ಎಸ್.ಕೆ.ಜಿ.' ಸ್ಟೋರ್ಸ್ನ 'ಎಸ್.ಕೆ.ಜಿ. ಮಿನಿ
ಮಾರ್ಟ್' ಆಗೋಕೆ ನೀನೆ
ಅಲ್ವೇನೋ ಕಾರಣ? "ಅಪ್ಪ,
ಸುಮ್ನಿರಪ್ಪಾ ನಿಂಗ್ ಇವೆಲ್ಲ
ಅರ್ಥ ಆಗಲ್ಲ" ಅಂತ
ನಂಗ್ ಬೈದು, ನೀನ್
ಒಂದ್ ವಾರ ಆಫೀಸ್ಗೆ
ಚಕ್ಕರ್ ಹಾಕಿ ಹಗಲು-ರಾತ್ರಿ ನೀನೆ ಸುಣ್ಣ-ಬಣ್ಣ ಮಾಡಿ, ಹೊಸ
ಮೇಜು-ಟೀಪಾಯಿ ಮಾಡಿ
ಅಂಗಡಿಗೆ ಹೊಸ ಕಳೆ
ತಂದ್ಕೊಟ್ಟೆ! ನೋಡಪ್ಪ, ಹತ್ತು
ವರ್ಷ ಆಯ್ತು, ಈಗ್ಲೂ
ನಾನ್ ಆ ಮೇಜಿನ
ಮೇಲೇ ಲೆಕ್ಕ ಬರ್ಯೋದು!
ಸುಮ್ನೆ, ತಲೇನ ತೆಗದಿಟ್ಟು
ಬಂಡಿನ ಎಳ್ಕೊಂಡ್ ಹೋದ್ರೆ,
ಆಯಾಸ ಆಗತ್ತೆ ಅಷ್ಟೇ
ವಿನಃ ನಿನ್ನ್ ಗುರಿ
ಮುಟ್ಟಲ್ಲ! ನೋಡ್ ಕಂದ...
ನಿನ್ನ ಹತ್ರ "ತಲೆ"
ಇದೆ.. ಇತ್ತೀಚಿಗೆ ಅದು
ಅಪರೂಪ ಆಗಿರೋದು ನಮ್ಮ್
ಅಂಗಡಿಗೆ ಬಾರೋ ಗಿರಾಕಿಗಳ್ನ
ನೋಡಿದ್ರೆ ಗೊತ್ತಾಗತ್ತೆ. ಆ
ತಲೆ ಮತ್ತೆ ಚುರುಕ್
ಮಾಡ್ಸು.. ಎಲ್ಲವು ಸಲೀಸಾಗತ್ತೆ.
ಏ..
ಸಾಕ್ ಬಿಡೋ ಬೇರೆಯವರ್ಗೆ
ಕೆಲ್ಸ ಮಾಡಿದ್ದು. ನೀನೆ
ಏನಾದ್ರು ಶುರು ಮಾಡು!
ಸುಮ್ನೆ ಅಪಾರ್ಟ್ಮೆಂಟ್-ಸಾಲ,
ಕಾರ್-ಸಾಲ ಅಂತ
ವರಿ ಮಾಡ್ಕೊಳ್ಬೇಡ ಕಂದ.
ನೋಡು ನಂದು ಒಂದಷ್ಟು
ಸೇವಿಂಗ್ಸು ಅಂತ ಇದೆ.
ಅದ್ರಲ್ಲಿ ನಿನ್ನ್ ಮನೆ
ಉಳ್ಯತ್ತ .. ಉಳಿಲಿ..ಸಂತೋಷ,
ಇಲ್ವಾ .. ಬಿಟ್ಹಾಕು ... ನಾನ್
ಕೊಂಡ್ಕೊಳ್ಬೇಕಾದ್ರೆನೇ ಹೇಳ್ದೆ, ಕೆರೆ
ಮುಚ್ಸಿ ಕಟ್ಟಿರೋ ಕಟ್ಟಡ
ಅದು, "ಗಟ್ಟಿಗಿರಲ್ಲ" ಅಂತ
.. ಅದ್ಬೇರೆ ಯಾವ್ದೋ ಮೂಲೆಯಲ್ಲಿದೆ. ಅದನ್ನ
ಬೆಂಗಳೂರು ಅಂತ ಯಾವ್
ಪುಣ್ಯಾತ್ಮ ಕರಿತಾನೋ? ಸಾಕ್ಸಾಕು
.. ನನ್ನ್ ಮೊಮ್ಮಗಳು-ಸೊಸೆನ
ಕರ್ಕೊಂಡು, ಎಲ್ಲ ಗಂಟು-ಮೂಟೆ ಕಟ್ಕೊಂಡು ಇಲ್ಲಿಗ್
ಬಂದ್ಬಿಡು; ಅದಿಕ್ಕ್ ಇಸ್ಕೂಲ್
ಶುರುವಾಗಬೇಕಾದ್ರೆ ಬೇರೆ ಏನಾದ್ರು
ಯೋಚ್ನೆ ಮಾಡಿವಂತೆ. ಈ
ಮನೆಯ ಗಾಳಿ-ನೀರು
ನಿಂಗ್ ಸೇವನೆಯಾದ್ರೆ ನಿನ್ನ್
ಚೇಷ್ಟೆ-ತುಂಟಾಟ ತಾನಾಗ್ತಾನೆ
ಬರತ್ತೆ!
ಅಂದ್ಹಾಗೆ,
ಹೇಗಿತ್ತು ನನ್ನ ಈ
ಪತ್ರದ ಓಪನಿಂಗು? "ತೀರ್ಥರೂಪ,
ಆಶೀರ್ವಾದ" ಅಂತೆಲ್ಲ ಬರ್ಕೊಂಡಿರೋ ಸ್ಟಂಟು!! ನೀನ್
ಇಸ್ಕೂಲಲ್ಲಿದ್ದಾಗ ಒಮ್ಮೆ ಪರೀಕ್ಷೆಯಲ್ಲಿ "ತೀರ್ಪುರೂಪ"
ಅಂತ ಬರ್ದಿದ್ದೆ ಜ್ಞಾಪಕ
ಇದ್ದೀಯ? ಹ್ಹ ಹ್ಹ
.. ಸರಿ ಬಾ, ಮುಖ-ಮುಖಿ ಕೂತು ನಾನು-ನೀನು ಮಾತಾಡಿ ವರ್ಷಗಳೇ
ಆಯ್ತು; ಬಾ ಎಷ್ಟೋ
ಇದೆ ಮಾತಾಡೋಕೆ. ಲೋ,
ಮುಂದಿಂತಿಂಗಳಿಗೆ ನಂಗೆ ಎಪ್ಪತ್ತೆರಡಾಗತ್ತೆ, ನಾನೇ
ಇನ್ನು ನನ್ನ ಹುಡುಗಾಟ
ಬಿಟ್ಟಿಲ್ಲ.. ನೀನ್ ಯಾಕ್
ಎಲ್ಲ ಬಿಟ್ಟು ಒಳ್ಳೆ
ಪಣಿಯಮ್ಮನ ತರ ಆಗಿದ್ಯ?
ಸರಿ-ಸರಿ ಕಾಗ್ದ ಮುಗಿತಾ
ಬಂತು, ನೀವೆಲ್ಲ ಯಾವತ್ತ್
ಇಲ್ಲಿಗ್ ಶಿಫ್ಟ್ ಆಗ್ತೀರ
ಅಂತ ಫೋನ್ ಮಾಡಿಹೇಳು,
ನಿಮ್ಮಮ್ಮಂಗೆ ಹಿಟ್ಟ್ ರುಬ್ಬಿಡಕ್ಕೆ ಹೇಳ್ತೀನಿ...
ಕೂಸ್ಗೆ ಇಡ್ಲಿ ಅಂದ್ರೆ
ತುಂಬ ಇಷ್ಟ!
ಸರಿ,
ನಿಮ್ಮೆಲ್ಲರ ನಿರೀಕ್ಷೆಯಲ್ಲಿ
-ಎಷ್ಟೇಯಾಗ್ಲಿ, ನಾನ್ ನಿಮ್ಮ್
ಅಪ್ಪ!
No comments:
Post a Comment