ಕವನ ಕವನ
ಬರೆಯೋ ತವಕ
ಲೇಖನಿಗಾಗಿದೆ
ಮನದ ತುಡಿತ
ತಿಳಿಸೋ ತನಕ
ನೆಮ್ಮದಿ ಬಾರದೆ ।। ಪ ।।
ಅದೆಂಥಾ ಆಸೆಯೇನೋ?
ಇದೊಂದು ಭಾಸವೇನು?
ಈ ನೂರಾರು ಆಲೋಚನೆಯಲಿ
ಒಂದೂ ಕೂಡದೆ!! ।। ಅಪ।।
ಶಬ್ದಕೋಶ ಪದಬಳಕೆ ಕಾಯ್ಕಿಣಿಯರಂತೆ
ಗೀಚಿ-ರಾಗ ನೀಡುವೆನು ಹಂಸಲೇಖರಂತೆ
ಕುಡುಕರಿನ ಪೋಲಿತನ ಯೋಗರಾಜರಂತೆ
ನಾಭಿಯಲಿ ದ್ರಾಕ್ಷಿಗಳು ರವಿಮಾಮನಂತೆ
ಏತಕೆ ಹೀಗೆ ನನಗೆ
ಒಂದು ಸಾಲೂ ಮೂಡದೆ?
ಒಣಗುತಿರುವ ಮೆದುಳು-ಶಾಯಿ
ಹಗಲು-ಇರುಳು ಕಾಡಿದೆ! ।।೧।।
ಸಖ-ಸಖಿಯ ನಡುವಿನಲಿ ಪ್ರೇಮಗೀತೆ ಬೇಕೆ?
ಅನಿಸಿಕೆಯ ಹೇಳಿಕೆಗೆ ಛಂದಸ್ಸು ಸಾಕೆ?
ಗಿರಿಗಳನು ನದಿಗಳನು ಓಲೈಸುವುದೇಕೆ?
ದೇಶಗಳ ಭಾಷೆಗಳ ಕೊಂಡಾಡಬೇಕೆ?
ಮೆಚ್ಚುಗೆಯ ಮತ್ತು ನನಗೆ
ಕ್ಷಣಿಕ ಸುಖದ ಬೇನೆ
ಅಂಜಿಕೆಯು ಮತ್ತಿನ್ನೇಕೆ...
ನನ್ನ ಭಾವ ತಾನೇ??! ।।೨।।
- ಶ್ರೀವತ್ಸ ಪ್ರಹಲ್ಲಾದ