Monday, October 15, 2018

ಗಲಾಟೆ ಸಾರು

ಗಲಾಟೆ ಸಾರು  



ನಮಸ್ಕಾರ, ನಾನು ನಿಮ್ಮ ಅಡುಗೆ-ಅರಮನೆಯ ಸಾರಥಿ ಶ್ರೀವತ್ಸ ಪ್ರಹಲ್ಲಾದ
ಮಧ್ಯಾಹ್ನ ಆಗ್ತಾಇದ್ಹಾಗೆ, ಉದರ, ಅದರ ಅಸ್ತಿತ್ವದ ಬಗ್ಗೆ ನೆನಪು ಮಾಡಿಕೊಡಲಾರಂಭಿಸಿತು. ಮೇಜಿನ ಮೇಲಿದ್ದ ಗಾಜಿನ ಡಬ್ಬಿಯನ್ನು ತಟ್ಟನೆ ಆಫೀಸಿನ ಭೋಜನ ಉಗ್ರಾಣಕ್ಕೆ (ಪ್ಯಾಂಟ್ರಿ) ಕೊಂಡೊಯ್ದೆನು. ಗಾಜಿನ ಡಬ್ಬಿಯ ಪ್ಲಾಸ್ಟಿಕ್ ಮುಚ್ಚಳವನ್ನು ತೆಗೆದು ಖಾಲಿಯಾಗಿ ಕುಳಿತಿದ್ದ ಮೈಕ್ರೋವೆವಿನ ಕಡೆಗೆ ನಡೆದೆನು. ಗಾಜು ಪೂರಾ ತುಂಬಿದ್ದರೆ ಅದು ನೈನ್ಟಿಯೇ (೯೦) ಇರಬೇಕು ಅಂತ ಎಲ್ಲೋ ಒಮ್ಮೆ ತಿಳಿದುಕೊಂಡ ಅರಿಮೆ ನನಗಿತ್ತು. ಹಾಗಾಗಿ ನಾನು ೯೦ ಸೆಕೆಂಡ್ಸ್ ಒತ್ತಿ ಸಾವಕಾಶದಿಂದ ನಿಂತು ಸದಾ ಕಾಲ ಮೂಕ ವಾರ್ತೆಯನ್ನು ಪ್ರಸಾರ ಮಾಡುವ ಟಿ.ವಿ. ಎತ್ತ ಗಮನ ಹರಿಸಿದೆನು... ಇನ್ನೇನು ಟಿ.ವಿ.ಯಲ್ಲಿ ಬರುತ್ತಿದ್ದ ವಿಷಯವನ್ನು ಗ್ರಹಿಸುವ ಮುನ್ನವೇ, ಮೈಕ್ರೋವವ್ನ್ 'ಬೀಪ್ - ಭೀಫ್' ಎಂದು ಕೂಗಲಾರಂಭಿಸಿತು. ನನ್ನ ಹಿಂದೆ ನಿಂತಿದ್ದವನು ನನ್ನನ್ನು ಓರೆಗಣ್ಣಿನಿಂದ ನೋಡುವ ಮುಂಚೆಯೇ ನಾನು ಮೈಕ್ರೋವೆವಿನ ಮಹಾದ್ವಾರವನ್ನು ತೆಗೆದೆನು; ಗಾಜಿನ ಡಬ್ಬಿಯಲ್ಲಿ ತುಂಬಿ ತುಳುಕುತಿದ್ದ ಸಾರಿನ ಸುಗಂಧ ಎಲ್ಲೆಡೆ ಪಸರಿಸಿತು! ಅಲ್ಲೇ ಕೈ ತೊಳಿಯುತಿದ್ದ ಇನ್ನೊರ್ವ ತನ್ನ ಜೊಲ್ಲನ್ನು ಒರೆಸುತ್ತಾ ... "ಸಾರಿನ ಸುವಾಸನೆ ತುಂಬಾ ಚೆನ್ನಾಗಿದೆ! .. ನೀವೇನಾ ಮಾಡಿದ್ದು?" ಎಂದನು ... ಅವನ ಪ್ರಶಂಸೆಯನ್ನು ಕೇಳಿದ ಕೂಡಲೇ ನನಗೇ ತಿಳಿಯದ ಹಾಗೆ ನನ್ನ ಎದೆಯು ಒಂದೆರಡಿಂಚು ಹಿಗ್ಗಿತು! "ಹಾಂ, ಹೌದು... ನೆನ್ನೆ ರಾತ್ರಿ ನಾನೇ ಮಾಡಿದ್ದು.. ಇದಕ್ಕೆ 'ಗಲಾಟೆ ಸಾರು' ಎಂದು ನಾಮಕರಣ ಮಾಡಿದ್ದೇನೆ, ತುಂಬಾ ಉಳಿದಿತ್ತು... ಮಿಕ್ಕಿದ್ದನ್ನು ಚೆಲ್ಲುವ ಬದಲು ಮಧ್ಯಾಹ್ನದ ಊಟಕ್ಕೆ ತಂದಿದ್ದೇನೆ" ಎಂದು ಹೇಳುತ್ತಾ ಅವನ ಕಡೆ ನಡೆದೆನು. "ಗಲಾಟೆ ಸಾರೆ? ಅದೇನದು? ಅದನ್ನ ಹೇಗೆ ಮಾಡೋದು?" ಅಂತ ನಾನು ಊಹಿಸಿದಂತೆಯೇ ಅವನು ಕೇಳಿದನು. ನಾನು ಒಳಗೊಳಗೆಯೇ ಹಿಗ್ಗುತ್ತಾ .. "ಅಯ್ಯೋ ಅದು ಬಹಳ ಸುಲಭ .. ಬಾ ಹೇಳಿಕೊಡುತ್ತೇನೆ.. " ಎಂದು ನನ್ನ ಬಲಗೈಯಲ್ಲಿ ಗಾಜಿನ ಡಬ್ಬಿಯನ್ನು ಹಿಡಿದು, ಎಡಗೈಯನ್ನು ಅವನ ಹೆಗಲಿನ ಮೇಲೆ ಹಾಕಿಕೊಂಡು ಕಾರಿಡಾರಲ್ಲಿ ನಡೆಯುತ್ತ ವಿಶೇಷವಾದ ಸಾರನ್ನು ಮಾಡುವ ವಿಧಾನವನ್ನು ಹೇಳಲಾರಂಭಿಸಿದೆನು.  




ನೋಡು ...  ಸಾರ್ ಮಾಡಕ್ಕೆ ಮೊದಲು ಟೊಮೇಟೊ ಬೇಕು ... ತಕ್ಮಟ್ಟಿಗೆ ತೊಳೆದು ಹೆಚ್ಕೋ .. ಆಮೇಲೆ ಕೈಗೆ ಯಾವ್ ಪಾತ್ರೆ ಸಿಗತ್ತೋ ಅದನ್ನ ತೊಗೊಂಡು ಒಲೆ ಮೇಲೆ ಇಡು... ಬಟ್ಟಲು ಕೈಗೆ ಸಿಕ್ಕಿದ್ರೆ ನಿನ್ನ ಕರ್ಮ.. ಆದ್ರೆ ಕೊಳದಪ್ಪಲೆ ಏನಾದ್ರು ಸಿಕ್ಕಿದ್ರೆ, ನನ್ನಹಾಗೆ ನಿನಗೂ ಅದೃಷ್ಟ .. ಮೂರ್-ಮೂರ್ ದಿನಕ್ಕೆ ಆಗೋ ಅಷ್ಟು ಸಾರನ್ನ ಮಾಡಬೊಹುದು.. ಪಾತ್ರೆಯಲ್ಲಿ ಕಂಠಪೂರ್ತಿ ಅಲ್ಲದಿದ್ದರೂ "ನಮ್ಮ್-ನಮ್ಮಲ್ಲಿ ಲೆಕ್ಕಾಚಾರ ಎಲ್ಲ ಯಾಕೆ?" ಅಂತ ಒಂದಷ್ಟು ನೀರನ್ನು ತುಂಬು ... ಒಲೆ ಹಚ್ಚಿದ ಮೇಲೆ "ಟಿ.ವಿ.ಯಲ್ಲಿ ಪ್ರಕಟವಾಗುತ್ತಿರುವ ಗೀತೆ ಸರಿಯಾಗಿ ಕೇಳುತ್ತಲೇ ಇಲ್ಲವಲ್ಲ" ಎಂದು ಗೊಣಗಾಡುತ್ತ ಅದರ ವಾಲ್ಯೂಮ್ ಹೆಚ್ಚಿಸಿ ಅಡುಗೆ ಮನೆಗೆ ಮರಳಿ ಬಾ. ಅಷ್ಟು ಸಮಯದಲ್ಲಿ ನೀರು ಖಂಡಿತವಾಗಿ ಬಿಸಿಯಾಗಿರುವುದಿಲ್ಲ .. "ಆದರೂ ಪರವಾಗಿಲ್ಲ" ಎಂದು ತಿಳಿದು, ನೀನು ಕೈಯಾರ ಹೆಚ್ಚಿಟ್ಟಿದ್ದ ಟಮ್ಯಾಟೊವನ್ನು ನೀರಿನಲ್ಲಿ ಹಾಕು. ಆಗ ... "ಅಯ್ಯೋ! ಸಾರಿಗೆ ಬೇಳೆ ಬೇಕಲ್ಲವೇ?" ಎಂದು ಜ್ಞಾಪಕ ಬರುತ್ತದೆ! ಆದರೆ ಅದಕ್ಕೆ ತೊಗರಿ ಬೇಳೆ ಹಾಕಬೇಕೋ ಅಥವಾ ಉದ್ದಿನ ಬೇಳೆ ಹಾಕಬೇಕೋ ಅನ್ನುವುದು ನಿನಗೆ ತಿಳಿದಿರುವುದಿಲ್ಲ ..  ಏಕೆಂದರೆ ಅದರ ಹೆಸರುಗಳು ಮಾತ್ರ ಎಲ್ಲೋ ಕೇಳಿರುವ ಹಾಗೆ ಇರುತ್ತದೆಯೇ ಹೊರತು ಅವುಗಳು ನೋಡಲು ಹೇಗೆ ಇರುತ್ತದೆ ಅನ್ನುವುದು ನಿನಗೆ ತಿಳಿದಿರುವುದಿಲ್ಲ! ಹಾಗಾಗಿ 'ರಿಸ್ಕ್' ಬೇಡವೆಂದು ಅಲ್ಲೇ ಅರೆ ನಿಮಿಷ ತಲ್ಲಣಿಸುತ್ತೀಯ. ಆಗ ಮೂಲೆಯಲ್ಲಿ ಈರುಳ್ಳಿ-ಬೆಳ್ಳುಳ್ಳಿಗಳು ಕಂಡು ಬರುತ್ತದೆ. " ಈರುಳ್ಳಿ-ಬೆಳ್ಳುಳ್ಳಿಗಳು ನಂಬಿದವರನ್ನು ಯಾವತ್ತೂ ಮೋಸ ಮಾಡಿಲ್ಲ, ಸ್ವಲ್ಪ ವಿಚಿತ್ರ ವಾಸನೆ ಹೊಂದಿದ್ದರು ವಾಟ್ಸಾಪ್ಗಳಲ್ಲಿ ಹೇಳುವ ಹಾಗೆ, ಅದರಲ್ಲಿ ರೋಗಗಳನ್ನು ಗುಣಪಡಿಸುವ ಶಕ್ತಿ ಉಂಟು" ಅಂತ ಅದರ ಗುಣಗಾನ ಮಾಡುತ್ತ ಟಿ.ವಿ. ಹಾಡಿನ ತಾಳಕ್ಕೆ ತಕ್ಕಂತೆ ಇವುಗಳನ್ನು ಹೆಚ್ಕೊ... ಅಂದ್ಹಾಗೆ, ನೀರು ಇನ್ನೂ ಕುದಿತಾಯಿರುವುದಿಲ್ಲ, ವಿಷಯ ಈಗ ನಿನಗೇನು ಹೊಸತೇನಲ್ಲ ಅಲ್ವೆ? ಹೆಚ್ಚಿದ ಈರುಳ್ಳಿ-ಬೆಳ್ಳುಳ್ಳಿಗಳನ್ನು ನೀರಿಗೆ ಹಾಕು, ಪರವಾಗಿಲ್ಲ. ಇರಲಿ ಅಂತ ಒಂದೆರಡು ಹಸಿ ಮೆಣಸಿನಕಾಯನ್ನು ಕೂಡ ಹಾಕು... ಕಾರ ಏನಾದರು ಹೆಚ್ಚಾದಲ್ಲಿ ನೀರು ಇದ್ದೆ ಇದೆ, ಮತ್ತೆ ಭಯ ಯಾಕೆ, ಅಲ್ವೇ? ಅಷ್ಟರಲ್ಲಿ ನಿನ್ನ ಮಗ .. "ಅಪ್ಪ, ಹಸಿವಾಗ್ತಾಯ್ದೆ .. ಸಾರ್ ಮಾಡಿದ್ದ್ ಆಯ್ತಾ?" ಎನ್ನುವನು ... ಏಟಿಗೆ ತಿರುಗೇಟು ಅನ್ನುವಹಾಗೆ, ನೀನು "ಮೊದ್ಲು ಹೊಂವರ್ಕ್ ಮುಗ್ಸು .. ಆಮೇಲೆ ಊಟದ ಬಗ್ಗೆ ಚಿಂತೆ ಮಾಡುವಂತೆ ..." ಅಂತ ಗಧರಿಸು, ನೀನೆ ಮನೆಯ ಯಜಮಾನ ಅಂತ ಅಕ್ಕ್-ಪಕ್ಕದ ಮನೆಯವರಿಗೂ ತಿಳಿಯಲಿ.     ಆದರೂ ಹೆತ್ತ ಕರಳು, ಪಾಪ ಮಗ ಕೇಳ್ತಾಇರೋದ್ರಲ್ಲಿ ತಪ್ಪಿಲ್ಲ ಎಂದು ತಿಳಿದು ಬಿರ್ರನೆ ಡ್ರಯ್ರ್ನಲ್ಲಿ ಇಟ್ಟಿದ್ದ ಒಂದಷ್ಟು ಪುಟ್ಟ-ಪುಟ್ಟ ಡಬ್ಬಿಗಳನ್ನು ತೆಗೆದುಕೊ; ಅದರಲ್ಲಿ ಪುಡಿಗಳು ಇರುತ್ತದೆ ... ಜೀರಿಗೆ ಪುಡಿ, ಧನಿಯಾ ಪುಡಿ, ಕೆಂಪು ಮೆಣಸಿನ ಪುಡಿ, ಕಪ್ಪು ಮೆಣಸಿನ ಪುಡಿ ಇತ್ಯಾದಿ ಇತ್ಯಾದಿ ..  ಇವುಗಳಲ್ಲಿ "ಅದ್ ಯಾವ್ದು - ಇದ್ ಯಾವ್ದು " ಅನ್ನೊ ಗೋಜಿಗೆ ಸಿಲುಕಿಕೊಳ್ಳಬೇಡ, ಸರ್ವ-ಧರ್ಮ-ಸಮನ್ವಯ ಪದ್ದತಿಯನ್ನು ನೆನೆದು ಎಲ್ಲವನ್ನು ಒಂದಿಷ್ಟು ಹಾಕು. ಸಾಮಾನ್ಯವಾಗಿ ನಮ್ಮ್-ನಮ್ಮ ಮಡದಿಯರು, ಇದರಲ್ಲೆಲ್ಲ 'ಹಾಕ್ಲೊ-ಬೇಡ್ವೊ' ಅನ್ನೋ ಸ್ಪೂನ್ಗಳನ್ನ ಇಟ್ಟಿರ್ತಾರೆ.. ಹಾಗಾಗಿ ಭಯಬೀತನಾಗಬೇಡ .. ಧ್ಯರ್ಯವಾಗಿ ಮುನ್ನುಗ್ಗು ಒಂದೆರಡ್ ಸ್ಪೂನ್ ಹಾಕು! ಇವೆಲ್ಲ ಪುಡಿಗಳನ್ನು ಹಾಕಿದನಂತರ ನೀರು ಒಂದು ರೀತಿಯ ಕಂದು ಬಣ್ಣಕ್ಕೆ ತಿರುಗುತ್ತದೆ ... ಇನ್ನು ಹೆಚ್ಚು ಬಣ್ಣ ಬರಲಿ ಎಂದು ಒಂದಷ್ಟು ಹುಣಸೆಹಣ್ಣನು ಹಾಕು, ಅದನ್ನು ಕಿವುಚಿ ಹಾಕುವ ತೊಂದರೆ ತೆಗೆದುಕೊಳ್ಳ ಬೇಡ. ಮುಂದೇನು ಮಾಡುವುದು ಎಂದು ಯೋಚಿಸುವ ಸಮಯದಲ್ಲಿ ಜವಾಬ್ದಾರಿ ತಂದೆಯ ಹಾಗೆ ನಟಿಸು! ಮಗನ ಬಳಿಗೆ ಹೋಗಿ "ಹೊಂವರ್ಕ್ ಆಯ್ತಾ ಕಂದ?" ಅಂತ ಬಾರಿ ಪ್ರೀತಿಯಿಂದ ಕೇಳು .. ಆಗ ಅವ್ನು .. "ಅಪ್ಪ, ಹೊಂವರ್ಕ್ ಆಗ್ಲೇ ಮುಗಿಸಾಯಿತು, ನಂಗೆ ತುಂಬಾ ಹಸಿವಾಗ್ತಾಯಿದೆ" ಎಂದು ತುಸು ಗಲಾಟೆ ಮಾಡಲು ಶುರು ಮಾಡುವನು ... ಅವನು ತನ್ನ ಅಳಲನು ಮುಗಿಸುವ ಮುನ್ನವೇ .. "ಸೈನ್ಸು.. ಮ್ಯಾತ್ಸು.. ಎರಡು ಆಯ್ತಾ?" ಅಂತ ಕೇಳು, ಸಾಮಾನ್ಯವಾಗಿ ಮಕ್ಕಳಿಗೆ ಮೇಷ್ಟ್ರುಗಳು ರೀತಿ ಹೊಂವರ್ಕ್ ಕೊಟ್ಟಿರ್ತಾರೆ.. ಆದ್ರೆ ಅದಕ್ಕೂ ಅವನೇನಾದರು 'ಆಯ್ತು' ಎಂದು ತಲೆ ಅಲ್ಲಾಡಿಸಿದರೆ, ವಿಷಯ ಯಾಕೋ ಗಂಭೀರವಾಗಿದೆ ಎಂದು ತಿಳಿದು ಕೂಡಲೇ ಸಾರಿನ ಬಳಿ ಬಾ. ನೀನು ನಿಜವಾಗಿಯೂ ಆಗ  ಗ್ಯಾಸ್-ಆನ್ ಮಾಡಿದ್ದರೆ, ಈಗ ಸಾರು ಕುದಿಯುತ್ತಿರುತ್ತದೆ. ಇದಕ್ಕೆ ಮುಖ್ಯವಾದ ಅಂಶ, ಉಪ್ಪು! ನೀನು ಸಾರಿಗೆ ಏನ್ ಹಾಕ್ತ್ಯೋ-ಬಿಡ್ತ್ಯೋ ಗೊತ್ತಿಲ್ಲ, ಸರಿಯಾದ ಪ್ರಮಾಣದಲ್ಲಿ 'ರುಚಿಗೆ ತಕ್ಕಷ್ಟು ಉಪ್ಪನ್ನು' ಹಾಕು. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕದಿದ್ದರೆ ಸಾರು ಕಲಗಚ್ಚಿಗೆ ಸಮ, ಜೋಕೆ!!  'ಒಹ್, ಅಂದಹಾಗೆ ಸಾರಿಗೆ ಒಗ್ಗರಣೆ ಬೇಡವೇ?' ಎಂದು ತಿಳಿದು ಒಂದು ಸೌಟನ್ನು ತೆಗೆದು ಒಲೆ ಮೇಲೆ ಇಡು. ಒಗ್ಗರಣೆಗೆ ಅಂತಾನೆ ಬೇರೆ ಮಸಿ ಬಣ್ಣದ್ದು ಒಂದು ಸೌಟು ನಿನ್ನ ಹೆಂಡತಿ ಉಪಯೋಗಿಸುತ್ತಿರುತ್ತಾಳೆ, ನೀನು ಅಲ್ಲೇ ನಿಂತು ತಿಪ್ಪರಲಾಗ ಹಾಕಿದರು ಸೌಟು ನಿನಗೆ ಸಿಗುವುದಿಲ್ಲ .. ಹಾಗಾಗಿ ಕಾಲ ಹರಣ ಮಾಡದೆ ಕೈಗೆ ಸಿಕ್ಕ ಸೌಟನ್ನೇ ಬಳಸು. ಒಂದಷ್ಟು ಎಣ್ಣೆ ಅದರಲ್ಲಿ ಹಾಕು. ನೋಡು, ದೊಡ್ಡ ಡಬ್ಬಿಗಳಲ್ಲಿದ್ದರೆ ಅದು ರಾಗಿ, ಚಿಕ್ಕದರಲ್ಲಿ ಇದ್ದಾರೆ ಅದು ಸಾಸವೆ; ನೀನು ಸಾಸವೆಯನ್ನು ಬಿಸಿ ಎಣ್ಣೆಯಲ್ಲಿ ಹಾಕು. ಅದು "ಸಿಡ-ಸಿಡ" ಅನ್ನುವುದು, ಆಗ ನಿನ್ನ ಹೆಂಡತಿಯ ಜ್ಞಾಪಕ ಕೂಡ ಬರಬೊಹುದು! ಆಮೇಲೆ ಜೀರಿಗೆ-ಸೋಂಪು ಎರಡು ಸಿಕ್ಕಿದ್ರೆ ಎರಡನ್ನು ಹಾಕು. ತೈಲ ಮಿಶ್ರಿತ ಸಾಸವೆ-ಜೀರಿಗೆಯನ್ನು ಕುದಿಯುತ್ತಿರುವ ಸಾರಿಗೆ ಹಾಕು. ಸೌಟು ಮಸಿ-ಕರೆ ಕಟ್ಟಿದರೆ ನೀನು ನಿಷ್ಠೆಯಿಂದ ಕೆಸಲವನ್ನು ಮಾಡಿದ್ದೀಯಾ ಎಂದು ಮನವರಿಕೆ ಮಾಡಿಕೊ. ಕೂಡಲೆ, ದೇವಸ್ಥಾನಗಳಲ್ಲಿ ಬಾಳೆ ಎಲೆಯಲ್ಲಿ ಸಾರು ತಿಂದ ನೆನಪಾಗುವುದು. "ಏಹ್ ! ದೇವಸ್ಥಾನದಲ್ಲಿ ಮಾಡುವ ಸಾರಿಗೆ ಇಡಿ ಕರಿಬೇವಿನ ಮರವನ್ನೇ ಹಾಕಿರುತ್ತಾರೆ ... ನಾನು ಒಂದಿಷ್ಟು ಎಲೆಗಳನ್ನು ಹಾಕಲಿಲ್ಲವಾದರೂ ಹೇಗೆ?" ಎಂದು ತಿಳಿದು ಹಿತ್ತಲಿನಲ್ಲಿ ಬೆಳೆದಿದ್ದ ಕರಿಬೇವು ಗಿಡವನ್ನು ನೆನೆಸಿಕೊ. ಆಗ .. "ಕರಿಬೇವು ಗಿಡಕ್ಕೆ ನೀರ್ ಹಾಕೋದನ್ನ ಮಾತ್ರ ಮರೀಬೇಡಿ" ಅಂತ ಹೆಂಡತಿ ಹೇಳಿ ಹೋಗಿದ್ದ ಸೂಚನೆಯನ್ನು ಕೂಡ ನೆನೆಸಿಕೊ. ಥಟ್ ಎಂದು, ಅರ್ಧಂಬರ್ಧ ಒಣಗ್ಹೋಗಿದ್ದ ಗಿಡಕ್ಕೆ ನೀರನ್ನು ಹಾಕಿ, ಒಂದಷ್ಟು ಎಲೆಗಳನ್ನು ಕಿತ್ತು ತಂದು ಕುದಿಯುತ್ತಿರುವ ಸಾರಿನಲ್ಲಿ ಹಾಕುಅಷ್ಟರಲ್ಲಿ ಮಗ, ಗಲಾಟೆ-ರಗಳೆ ಮಾಡುತ್ತಿರುತ್ತಾನೆ. ಅವನಿಗೆ ನಿನ್ನ ಕೈಲಾದ ಸಮಾಧಾನ ಮಾಡಿ, ತಟ್ಟೆ ಇಟ್ಟು ಅನ್ನ ಮತ್ತು ನಿನ್ನ ಸಾರನ್ನು ಬಡಿಸು. "ಉಪ್ಪಿಲ್ಲ , ಹುಲಿ ಇಲ್ಲ, ರುಚಿ ಇಲ್ಲ " ಅಂತ ಅವನು ಶುರು ಮಾಡಿದರೆ .. 'ರೈತರ ಕಷ್ಟ-ಶ್ರಮ.....ಅನ್ನದ ಬೆಲೆ ನಿನಗೇನ್ ಗೊತ್ತು?.... ನಾನ್ ನಿನ್ನ ವಯಸ್ಸಲ್ಲಿ ಇದ್ದಾಗ.. ' ಅನ್ನೊ ಉಪನ್ಯಾಸದ ಮಾತುಗಳು ನಿನಗೆ ಈಗಾಗ್ಲೆ ಗೊತ್ತೇ ಇದೆ .. ಸಮಯ-ಸಂದರ್ಭಕ್ಕೆ ಅನುಗುಣವಾಗಿ ಅದನ್ನು ಬಳಸು. ಕಷ್ಟವಾದರೂ ಇಷ್ಟ ಪಟ್ಟು ನಿನ್ನ 'ಗಲಾಟೆ ಸಾರನ್ನು' ತಿಂದು ಸಂತೃಪ್ತನಾಗಿ ಭೀಮಸೇನ ನಳಮಹಾರಾಜರನ್ನು ನೆನೆದು ನಿನ್ನ ಮನಸ್ಸಿನಲ್ಲೆ ನಮನಗಳನ್ನು ಸಲ್ಲಿಸು
ಇಷ್ಟೇನಪ್ಪ ಗಲಾಟೆ ಸಾರು!             


2 comments:

  1. Galaate saarina ingredientsu and situation Nan first time aduge mane experience jnapaka banthu, of course I was not married then ;)
    Surely enjoyed the realistic conversation more than the recipe.

    ReplyDelete
  2. ಬಹಳ ತಮಾಷೆಯಾಗಿ ಬರೆದಿದ್ದೀರಾ! ಲೇಖನ ಓದುತ್ತಿರುವಷ್ಟೂ ಹೊತ್ತು ಸಾರಿಗೆ 'ಗಲಾಟೆ' ಎಂಬ ವಿಶೇಷಣ ಏಕೆ ಕೂಡಿ ಬಂತು ಅನ್ನುವ ಕುತೂಹಲ ಇದ್ದೇ ಇತ್ತು. "ಮನೆಯಾಕೆ ನೀವು ಮಾಡಿರುವ ಮಹತ್ಕಾರ್ಯವನ್ನು ಮೂದಲಿಸುತ್ತಾ ಮುನಿಸಿಕೊಂಡು ಮೂತಿಗೆ ತಿವಿದು ಮನೆಯಾಚೆ ಮುಖಮಾಡಿದಂತಹ ಮಹಾಸಂದರ್ಭಗಳಿಗೇ ಮೀಸಲಿಟ್ಟ ಮಹಿಮಾನ್ವಿತ ಸಾರು" ಇರಬಹುದೇನೋ ಎಂದು ಊಹಿಸುತ್ತಿದ್ದೆ. :)
    ಆದರೆ ಇದು ಪಾತ್ರೆಗಳಿಗೂ, ತರಕಾರಿಗಳಿಗೂ, ಮಸಾಲೆ ಪದಾರ್ಥಗಳಿಗೂ ನಡೆದ ಗಲಾಟೆಯಲ್ಲಿ ಪ್ರಾದುರ್ಭವಿಸಿದ ವಿಶೇಷ ದ್ರವ್ಯವೆಂಬುದು ಈಗ ಮಾನವರಿಕೆಯಾಯ್ತು!

    ReplyDelete