Tuesday, September 16, 2014

ಕಾಫಿ, ಅಡುಗೆ, ಆಟೋ ಚಾರ್ಜ್

Click for the Audio

ಪ್ರೀತಿಯ ಸುಶೀಲ

ಅಪ್ರೂಪಕ್ಕೆ ನಾನ್ ಕಾಫಿ ಮಾಡಿ ತಂದಿಟ್ಟಿದ್ದೀನಿ, ಬಿಸಿ ಆರೋದ್ರಲ್ಲಿ ಕುಡ್ದಿದ್ಯ ಅಂತ ಭಾವಿಸ್ತೀನಿ. ಗೊತ್ತು- ನಾನೇ ಬೇಕು ಅಂತ ಸಕ್ಕರೆ ಕಡಿಮೆ ಹಾಕಿದ್ದೆ. ಸವಿತಾ ಹೊರಡೋದ್ರಲ್ಲಿ ನೀನೂ ತಿಂಡಿ ಮುಗಿಸ್ಕೊ. ನಾನು ಪ್ರೀತುನ ಸ್ಕೂಲಿಗೆ ಬಿಟ್ಮೇಲೆ ಒಂದ್ ಮಿಸ್ಡ್ ಕಾಲ್ ಕೊಡ್ತೀನಿ. ಕೃಷ್ಣರಾವ್ ಪಾರ್ಕಿಗೆ ಬಾ, ಹಾಂ.. ಅದೇ ಜಾಗ! ದೇವರ ಗೂಡಲ್ಲಿ ಇಟ್ರೆ ನೀನ್ ಪತ್ರನ ನೋಡೇ ನೊಡ್ತ್ಯ ಅಂತ ಗೊತ್ತು; ಜೊತೆಯಲ್ಲಿ ಆಟೋ ಚಾರ್ಜ್ ಕೂಡ ಇಟ್ಟಿದ್ದೀನಿ. ನಿನ್ನ್ ಮಗಳು ಪ್ರತಿದಿನ ನಂಗೆ ಆಟೋ ಚಾರ್ಜ್ ಇಟ್ಟು ಹೊಗ್ತಾಳೆ, ಇವತ್ತು ನಾನ್ ನಿಂಗೆ ಇಟ್ಹೋಗ್ತಾಯಿದ್ದೀನಿ! 'ಯಾಕೆ' 'ಏನು' ಅನ್ನೋ ಪ್ರಶ್ನೆಗಳಿಗೆಲ್ಲ ವಿಸ್ತಾರವಾಗಿ ಪತ್ರದಲ್ಲಿ ಬರ್ದಿದ್ದೀನಿ. ಆಟೋದಲ್ಲಿ ಕೂತು ಓದ್ಕೊಂಡು ಬಾ. ಹುಷಾರು

ಜ್ಞಾಪಕ ಇದ್ಯ? ನಾನ್ ಮುಂಚೆ ಸಿಕಂದ್ರಬಾದ್ಗೆ ಹೋದಾಗ್ಲೆಲ್ಲ ನಿಂಗೆ ಪೇಜ್ಗಟ್ಲೆ ಪತ್ರ ಬರಿತಾಯಿದ್ದೆ. ಒಂದೆರಡ್ ಸರ್ತಿ ಅಂತು ಎರೆಡೆರಡು ಎನ್ವಲೋಪ್ ಒಟ್ಗೆ ಕಳ್ಸಿದ್ದೆ! ಈಗಪತ್ರ ಬರಿದೇ-ಬರಿದೇ ಏನ್ ಬರೀಬೇಕು ಅಂತ ಗೊತ್ತಿದ್ರೂ ಹೇಗ್ ಬರೀಬೇಕು ಅಂತ ಮರ್ತ್ಹೋಗಿದೆ
ಯಾಕೋ ಗೊತ್ತಿಲ್ಲ, ಪತ್ರ ಬರಿಬೇಕಾದ್ರೆ ನಿನ್ನ ಮೊದಲ ಸಲ ಭೇಟಿ ಆಗಿದ್ದಾಗ ಇದ್ದ ನಿನ್ನ ಮುಖ, ನಿನ್ನ ಹುಟ್ಟು ಜ್ಞಾಪಕ ಬರ್ತಾಯಿದೆ. ನೀನ್ ಉಟ್ಕೊಂಡಿದ್ದ ಸೀರೆ ಸಿಂಪಲ್ಲಾಗಿದ್ರು ಚೆನ್ನಾಗಿತ್ತು. ಆದ್ರೆ ನೀನ್ ಅದನ್ನ ಅಷ್ಟೇ ಕೆಟ್ಟದಾಗಿ ಉಟ್ಕೊಂಡಿದ್ದೆ. ಒಳ್ಳೆ ಒನಕೆಗೆ ಬಟ್ಟೆ ಸುತ್ತಿದ್ಹಂಗಿತ್ತು. ಎಷ್ಟೇ ಆಗಲಿ ಅರಸಿಕೆರೆ ಜನ, ಒಡ್ಡೋಡ್ಡು. ಅದರ ಮೇಲೆ ಬೇಡದೇ ಇರೋ ನಾಚಿಕೆ ಬೇರೆ! ಎರಡ್ ಮಾತ್ಗಿಂತ ಹೆಚ್ಚ್ ಆಡಿದ್ರೆ ಮುತ್ತ್ ಉದ್ರ್ಹೋಗತ್ತೆ ಅನ್ನೊಹಾಗೆ. ನಾನ್ ಬೆಂಗಳೂರಿಗೆ ವಾಪಸ್ ಹೊಗಿದ್ ತಕ್ಷಣ ಅಮ್ಮ-ದೊಡ್ಡಪ್ಪನಿಗೆ ಅದನ್ನೇ ಹೆಳಿದ್ದು- "ಹುಡುಗಿ ಒಪ್ಗೆನೇ ... ಆದ್ರೆ ಸ್ವಲ್ಪ ಮಾತು ಕಡಿಮೆ" ಅಂತ; ಅದಿಕ್ಕೆ ದೊಡ್ಡಪ್ಪ ಇದ್ದೌರು, ಯತಾಪ್ರಕಾರ ಪೇಪರ್ ಓದ್ತಾ "... ಹೆಣ್ಣು ಸೌಮ್ಯವಾಗಿದ್ರೇನೆ ಒಳ್ಳೇದು; ಹಾಗೆ ಇರ್ಲಿ ಬಿಡು..." ಅಂತ ಅಂದ್ರು. ಆದ್ರೆ ಮದ್ವೆ ಆದ್ಮೆಲೇ ಗೊತ್ತಾಗಿದ್ದು ನೀನ್ ಅಷ್ಟೊಂದು ಮಾತಾಡ್ತ್ಯ ಅಂತ! ಮದ್ವೆ ಆದ್ ಹೊಸ್ತ್ರಲ್ಲಿ ನಿನ್ನ್ ಜೊತೆ ಬೆಣ್ಣೆ ದೋಸೆ ತಿನ್ನೋ ಆಸೆಲಿ ನಾನು ಟು ಹವರ್ಸ್ ರಜೆ ಹಾಕಿ ಬರೋದು, ನಮ್ಮ್ ಪಾರ್ಕಿನ ಬಂಡೆ ಮೇಲೆ ಕೂತ್ಕೊಂಡು ಬೆಟ್ಟದಷ್ಟು ಮಾತಾಡಿ ಇನ್ನೇನ್ ಅಂಗಡಿ ಬಾಗಲ್ಹಾಕೋ ಟೈಮ್ಗ್ಹೋಗಿ ಭಟ್ರು ಕೈಯ್ಯಲ್ಲಿ ಬಯ್ಯಿಸ್ಕೊಂಡ್ರೂ "ಇದೇ ಲಾಸ್ಟ್ ಟೈಮ್ ಭಟ್ರೇ" ಅಂತ ಹಲ್ ಕಿರೀತ ದೋಸೆ ಆರ್ಡರ್ ಮಾಡೋದು. ಕೊನೆಗೆ ನಮ್ಮ್ ಕಾರಣಕ್ಕೋ ಏನೋ, ಭಟ್ರು ಏಳ್ಗಂಟೆವರ್ಗು ಅಂಗಡಿ ಒಪನ್ಮಾಡಿರ್ತಿದ್ರು! ಅಷ್ಟೇ ಯಾಕೆ, ಪ್ರತಿವಾರ ಮಿಸ್ಸ್ ಇಲ್ದೆ ದೊಡ್ಡ್-ಗಣೇಶನ್ ಗುಡಿ, ಎರಡ್-ಮೂರ್ ವಾರಕ್ಕೆ ಒಂದ್ ಒಳ್ಳೆ ಸಿನಿಮಾ, ತಿಂಗಳೆರಡ್ತಿಂಗಳಿಗೊಮ್ಮೆ ಅಮ್ಮನ್ ಜೊತೆ ಮೈಸೂರ್ ಕಡೆ ಚಾಮುಂಡಿ ಬೆಟ್ಟ ಇಲ್ದಿದ್ದ್ರೆ ತುಮಕೂರ್ ಕಡೆ ಯೋಗ ನರಸಿಂಹ. ಮತ್ತೆ ಎಲ್ಲಾ ಮೇಜರ್ ಹಬ್ಬಗಳಿಗೂ ಅರಸಿಕೆರೆ. 'ಪಿಚ್ಚರ್ ಪರ್ಫೆಕ್ಟ್' ಅಂತಾರಲ್ಲ ಹಾಗಿತ್ತು ನಮ್ಮ್ ಜೀವನ!

ನಿಮ್ಮ್ ತಂದೆ ನಂಗೆ ಇದ್ವರ್ಗು ಡೈರೆಕ್ಟಾಗಿ ಏನನ್ನು ಹೇಳೇ ಇಲ್ಲ! ಹಬ್ಬದ ಊಟ ಮುಗಿಸ್ಕೊಂಡ್ಮೇಲೆ ಜಗಲಿ ಮೇಲೆ ಕೂತಾಗಲೆಲ್ಲ ಸಮಯ ನೋಡ್ಕೊಂಡು "ಅಳಿಯಂದ್ರೆ, ಮುಂದೇನ್ ಪ್ಲಾನು?" ಅಂತ ಕೇಳೌರು. ಅವರ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ನಮ್ಮ್ ಸವಿತಾಳ ರೂಪದಲ್ಲಿ! ನಿಮ್ಮ್ ತಂದೆಗಂತೂ ಸವಿತಾ ಹುಟ್ಟ್ದಾಗ ತಡಿಲಾರದ ಖುಷಿ! ನಿನ್ನ್ ಬಾಣಂತನದಲ್ಲಂತೂ ಹೂವಕ್ಕಿಂತ ಸೋಕ್ಷ್ಮವಾಗ್ ನೋಡ್ಕೊಳೌರು. "ಮೆತ್ಗೆ ಸರೋಜ... ಅಷ್ಟ್ ಜೋರಾಗಿ ಮಗು ಬೆನ್ನ್ ಉಜ್ಜ್ಬೇಡ್ವೆ... ಅದಿಕ್ಕ್ ನೋವಾದಾತುಅಂತ ನಿಮ್ಮ್ ಅಮ್ಮಂಗೆ ಸ್ನಾನ ಮಾಡ್ಸಕ್ಕೇ ಬಿಡ್ತಾಯಿರ್ಲಿಲ್ಲ. ಕೈಗೂಸು ಆದ್ ಯಾವಾಗ್ ಹೊರಳ್ತೊ, ಅದ್ಯಾವಾಗ್ ಅಮ್ಬೇಗಾಲ್ ಇಡ್ತೊ, ಅದ್ಯಾವಾಗ್ ನಡ್ಕೊಂಡ್ ಸ್ಕೂಲಿಗ್ ಹೋಯ್ತೋ ಅನ್ನೋದು ನಂಗೆ ಈಗ ಜ್ಞಾಪಕವೇ ಇಲ್ಲ! ಆದ್ರೆ ನೀನಂತೂ, ನಿನ್ನ ಪ್ರಪಂಚಾನ ಮಗಳ ಆಟೋಟದಲ್ಲೇ ಹೆಣೆಯಕ್ಕೆ ಶುರು ಮಾಡ್ಕೊಂಡಿದ್ದೆ! "ಊಟ-ನಿದ್ದೆ ಯಾವಾಗ್ ಮಾಡ್ದೆ?" ಅಂತ ಕೆಳೋದಿರ್ಲಿ, "ಇತ್ತೀಚಿಗೆ ಅವೆಲ್ಲ ಮಾಡ್ತಾಇದ್ಯ??" ಅಂತ ಕೆಳೋಕೂ ನಂಗೆ ಆಗ್ತಾಯಿರ್ಲಿಲ್ಲ; ನೀನ್ ಅಷ್ಟ್ ಬಿಜಿ ಆಗಿದ್ದೆ. ಇನ್ನೇನ್ ಬಿಡುವಾಗತ್ತೆನೋ ಅಂತ ಅಂದ್ಕೊಳೊದ್ರಲ್ಲಿ ನಮ್ಮ್ ಸುಮಂತ ಹೊಟ್ಟೆಯಲ್ಲಿ ಬೆಳಿಲಿಕ್ಕ್ ಶುರುವಾದ. ನಿನ್ನ್ ಬಸರು-ಬಾಣಂತನ ನಮ್ಮನೇಲೆ ಆಗಿದ್ರಿಂದ ಇವನ್ ಬೆಳದಿದ್ ಹಂತಗಳು ಸ್ವಲ್ಪ ಜ್ಞಾಪಕ ಇವೆ. ಸುಮಂತ ಅವನ್ ಸ್ಕೂಲ್ ಮೊದಲನೇ ದಿನದ ರಾದ್ಧಾಂತ ನೆನೆಪಿದ್ಯ? "ಯೂನಿಫಾರಂ ಚಡ್ಡಿ ಬ್ಲೂ ಬೇಡ ರೆಡ್ಡ್ ಬೇಕು" ಅಂತ ಇಡಿ ಕಾಲೋನಿ ಕೇಳಿಸ್ಕೊಳೊ ಹಾಗೆ ಕೂಗಾಡಿದ್ದ

ಅದಿರ್ಲಿ, ನಾವೆಲ್ಲರು ಶೃಂಗೇರಿ-ಮಂಗಳೂರು-ಮುರುಡೇಶ್ವರ ಟ್ರಿಪ್ ಮಾಡಣ ಅಂತ ಅಂದ್ಕೊಂಡಿದ್ವಿ. ಸುಮಂತ ಅಂತು ಅವನ ಕಡೆಯ ಎಕ್ಸಾಮ್ ದಿನ  ಟ್ರಿಪ್ ಬಗ್ಗೆ ತನ್ನ ಎಲ್ಲಾ ಗೆಳಯರ ಹತ್ರ ಢಂಗೂರ ಸಾರ್ಕೊಂಡ್ಬಂದಿದ್ದ. ನಮ್ಮ್ ಸವಿತಾನು ಅಷ್ಟೆ- 'ಇದು ಮಲ್ಪೆ ಬೀಚ್ಗೆ', 'ಇದು ಮುರುಡೇಶ್ವರಕ್ಕೆ' ಅಂತ ಹಳೆ ಚುಡಿದಾರಗಳನ್ನೆಲ್ಲ ಎತ್ತಿಡಕ್ಕ್ ಶುರು ಮಾಡಿದ್ಲು. ಮಕ್ಕಳ ಹುಮ್ಮಸ್ನೋಡಿ ಮರು ದಿನವೇ ಹೋಗಿ ನಾನ್ ಅಂಬಾಸಿಡರ್ ಬುಕ್ಕ್ ಮಾಡಿದ್ದೆ. ವಿಪರ್ಯಾಸ ಏನಂದರೆ ನಾವ್ ಟ್ರಿಪ್ಗೆ ಹೋಗಕ್ಕೇ ಆಗ್ಲಿಲ್ಲ; ಅಮ್ಮ ಬಚ್ಚಲು ಮನೆಯಲ್ಲಿ ಜಾರ್ ಬಿದ್ದು ಬೆನ್ನ್ಮೂಳೆ ಮುರ್ಕೊಂಡ್ರು. ಎಷ್ಟ್ ಬೇಡ ಅಂದ್ರು ಕೇಳ್ತಿರ್ಲಿಲ್ಲ- "ಇರ್ಲಿ ಬಿಡು, ನನ್ನ್ ಕೈಕಾಲ್ಗಳು ಇನ್ನೂ ಗಟ್ಟಿಗಿವೆ" ಅಂತ ಅವರೇ ಬಾಯಿಲರ್ಗೆ ನೀರ್ ತೊಡೌರು. ಒಂದಲ್ಲ-ಒಂದಿನ ಹೀಗೆ ಆಗ್ಬೇಕಾಗಿದ್ದೆ. ಘಟನೆ ಆದ್ಮೇಲೆ, ಟ್ರಿಪ್ ಇರ್ಲಿ, ನಾವೆಲ್ಲರೂ ಒಟ್ಟಿಗೆ ಎಲ್ಲೂ ಹೋಗಕ್ಕೆ ಆಗ್ಲೇಯಿಲ್ಲ

ಇಷ್ಟ್ ತೊಂದ್ರೆ ಸಾಲ್ದು ಅಂತ ನಂಗೆ ಸಿಕಂದ್ರಬಾದಿಗೆ ಹೋಗೋಕೆ ಹುಕ್ಕುಮ್ಮತ್ ಬಂತು. ವರ್ಗಾವಣೆ ಅಲ್ದಿದ್ರೂ ವರ್ಷಕ್ಕೆ ಮೂರ್-ನಾಕ್ ತಿಂಗಳು ಇನ್ಸ್ಪೆಕ್ಷನ್-ಆಡಿಟ್ಗೆ ಅಂತ ಹೋಗ್ಬೇಕಾಗಿತ್ತು. ನನ್ನ ಪ್ರೀತಿ-ಸಲ್ಲಾಪ ಹುಸಿ-ಕೋಪ ಮಾತು-ಕತೆ ಇವೆಲ್ಲ ಪತ್ರಗಳಲ್ಲಿ ಮಾತ್ರ ಕಾಣಿಸ್ಕೊಳ್ಳೋಕೆ ಶುರುವಾಯ್ತು. ಮೊದಲನೆ ಬಾರಿ ನಾನ್ ಹೋದಾಗ ಸಹಾಯಕ್ಕೆ ಅಂತ ವಿಶಾಲು ಬಂದ್ ನಿನ್ನ್ ಜೊತೆಲಿದ್ಲು; ಅಟ್ಲೀಸ್ಟ್ ಆಗ ನಿಂಗ್ ನನ್ನ ಪತ್ರಗಳಿಗೆ ಪ್ರತ್ಯುತರ ಬರಿಯೋಕೆ ಸ್ವಲ್ಪ ಪುರ್ಸ್ಹೊತ್ತಾಗ್ತಾಯಿತ್ತು; ಆದ್ರೆ ಮುಂಬಂದ ವರ್ಷಗಳು ನಿಂಗ್ ಇನ್ನು ಕಷ್ಟ ಆದ್ವು. ನನಗು ಹೊಸ್ಹೊಸದನ್ನ ಕಲ್ಪಿಸ್ಕೊಂಡು ಪತ್ರ ಬರಿಯೊ ವಯಸ್ಸು ಇರಲಿಲ್ಲ; ನನ್ನ ಹುರಿದುಂಬಿಸಿ ಪುನಃ ಕವಿಯನ್ನಾಗಿ ಮಾಡೊ ಶಕ್ತಿ ನಿನಗಿರ್ಲಿಲ್ಲ. ನಿನ್ನ್ ತಂಗಿ ಕೂಡ ಬಸರು-ಬಾಣಂತನ ಅಂತ ಸಂಸಾರದ ಸರ್ಕಸ್ ಶುರು ಮಾಡ್ಕೊಂಡ್ಲುಅಮ್ಮನ ಆರೋಗ್ಯ ಬೇರೆ ಕ್ರಮೇಣವಾಗಿ ಕೆಡ್ತಾಯಿತ್ತು; ಕೊನೆಗೆ ನಿನ್ನ ಅಸ್ತಿತ್ವ ಅಂತ ಆಗಿದ್ದು ಅತ್ತೆ-ಆರೋಗ್ಯ, ಮಕ್ಕಳ ಹೊಮ್ವರ್ಕು-ಸ್ಕೂಲು-ಎಕ್ಸಾಮು, ಗಂಡನ ಲಂಚ್ಬಾಕ್ಸು, ಮಂಡಿ ನೋವು -ಇಷ್ಟೆ

ಮೊದಮೊದಲು ನಿನ್ನ್ ಕಷ್ಟ ನೋಡಿ ನಂಗೆ ತುಂಬಾನೆ ಬೇಜಾರಾಗೋದು. ಆದ್ರೆ ಅವೆಲ್ಲ ನಿಧಾನವಾಗಿ ಅಭ್ಯಾಸವಾಗೋಯ್ತು. ನಿಜ ಹೇಳ್ಬೇಕು ಅಂತಂದ್ರೆ, ಪ್ರಪಂಚದ ಜ್ಞಾನವೇ ಇಲ್ದೇಇರೌಳ್ಹತ್ರ ಏನ್ ಮಾತು ಅನ್ನೋ ಅಸಡ್ಡೆ ನನ್ನನ್ನ ಆವರಿಸ್ಕೊಂಡ್ತು. ನನಗನ್ನಿಸೋ ಮಟ್ಟಿಗೆ ಬರಿ ದಿನಿಸಿ ತರಬೇಕಾದ್ರೆ ಮಾತ್ರ ನಾನ್ ನಿನ್ನ್ ಜೊತೆ ಮಾತಾಡ್ತಾಯಿದ್ದೆ. ಇನ್ಮಿಕ್ದಾಗೆಲ್ಲ 'ಹು-ಉಹು' ಅಷ್ಟೆ. ನಿನ್ನ ಹುಟ್ಟುಹಬ್ಬ ಮರ್ತೆ, ನಮ್ಮ್ ಆನಿವಾರ್ಸರಿ ದಿನ ಮರ್ತೆ, ಇನ್ನೇನ್ ನಾನು ನಿನ್ನನ್ನೂ ಮರ್ತು ಬೇರೆ ಕಡೆ ವಾಲೋದ್ರಲ್ಲಿ ನೀನ್ ನಿನ್ನ ಮೌನ ಮುರ್ದೆ! ಸುಶೀಲಾ, ನೀನ್ ಅವತ್ತು ದೇವರ್ಮನೆಲಿ ನನ್ನ ಕೂಡಿಸ್ಕೊಂಡು ಮಾತಾಡಿರ್ಲಿಲ್ಲ ಅಂದಿದ್ರೆ ನನಗಿವತ್ತು ದೇವರ್ದೀಪ ಹಚ್ಚಕ್ಕೆ ಮುಖಾನೆ ಇರ್ತಿರ್ಲಿಲ್ಲ ಕಣೆ! ನನ್ನ್ ಅಹಂಗೆ ಕೆಡಕ್ಮಾಡ್ದೆ ನಾಜೂಕಾಗಿ ನನ್ನ ಸರಿ ದಾರಿಗೆ ವಾಪಸ್ಸ್ ತಂದಿದ್ದಿಕ್ಕೆ ನಾನ್ ಚಿರರುಣಿ. ಫೀಜ್ ಕಟ್ಟೊ ಅಪ್ಪ, ದಿನಸಿ ತರೋ ಗಂಡ, ಔಷಧಿ ತಂದ್ಕೊಡೊ ಮಗ - 'ಇದು ನನ್ನ ಕರ್ಮ', ಅಂತ ಅಂದ್ಕೊಳೋದನ್ನ ನಿಲ್ಸಿ ಮತ್ತೊಮ್ಮೆ ಪ್ರಾಮಾಣಿಕನಾಗಿ ಬದುಕಕ್ಕೆ ಶುರು ಮಾಡ್ದೆ. ಒಳ್ಳೆ 'ಫ್ಯಾಮಿಲಿ ಮ್ಯಾನ್' ಆಗ್ಬಿಟ್ಟೆಹೋಂವರ್ಕ್ ಮಾಡ್ಸೊವಾಗೆಲ್ಲ ನನ್ನ ಚಾಕಚಕ್ಯತೆ, ಬುದ್ದಿವಂತಿಕೆ ಮಕ್ಕಳ್ ಮುಂದೆ ಪ್ರಧರ್ಶಿಸ್ತಾಯಿದ್ದೆ

ಹೇಗೊ ಒಂದು, ನನ್ನ ಗರಡಿಯಲ್ಲೇ ಪಳಗಿದ ಸವಿತಾಗೆ ಅವಳ್ ಇಷ್ಟ ಪಟ್ಟಿದ್ದೇ ಕಾಲೇಜ್ ಸೀಟ್ ಸಿಗ್ತು. ಡಿಗ್ರಿ ಆಯ್ತು, ಮಾಸ್ಟರ್ಸ್ ಮಾಡಿದ್ಲು ಕೆಲಸಾನೂ ಹುಡುಕ್ಕೊಂಡ್ಲು; ಕೆಲಸದ ಜೊತೆ ತನ್ನ ಜೊತೆಗಾರನನ್ನು ಸಹ ಹುಡುಕ್ಕೊಂಡ್ಲು! ಈಗ್ಲೂ ಹೇಳ್ತಿನಿ ನಂಗೆ ಲವ್ ಮ್ಯಾರೇಜ್ ಬಗ್ಗೆ ಯಾವ್ದೇ ರೀತಿಯ ಅಭ್ಯಂತರ ಇರ್ಲಿಲ್ಲ ಆದ್ರೆ, ಶೇಕರ್ ಮನೆಯವರು ಮಾಂಸ ತಿನ್ನೋ ಜನ ಅಂತ ತಿಳಿದ್ಮೇಲೆ ಅವರ ಮನೆಗೆ ಹೋಗಿ ತಿಂಡಿ-ಕಾಫಿ ತೊಗೊಳಕ್ಕೆ ಏನೋ ಒಂದ್ ರೀತಿ ಮುಜುಗರ ಇತ್ತು ಅಷ್ಟೆ. ಅದಿಕ್ಕೆ ತಾನೇ ಮದುವೆ ಮಾತುಕತೆಗೆ ಅಂತ ನಾವ್ ನಮ್ಮ್ ಬೀಗರನ್ನ 'ಯಾತ್ರಿನಿವಾಸ್' ಹೋಟೆಲ್ನಲ್ಲಿ ಭೇಟಿ ಆಗಿದ್ದಿದ್ದು! ''ಕಾರಕ್ಕೆ ''ಕಾರ ಬಳಸ್ತಿದ್ರು ಅಷ್ಟೇವಿನಃ ಪರಪ್ಪನವರ ಮಾತ್ನಲ್ಲಿ ತೂಕ ಇತ್ತು. ನಿಮ್ಮ್ ಇಷ್ಟದಂತೇನೆ ಮದ್ವೆ ಮಾಡಿ ಕೊಡಿ ಅಂತ ಅವರು ಕೈ ಹಿಡಿದು ಕೇಳ್ದಾಗ ನನಗಿದ್ದಿದ್ದ ತುಸಿ ಮುಜುಗರವೂ ಹೊರಟ್ಹೋಯ್ತು! ಅವ್ರ್ ಮಾತ್ ತಪ್ಲಿಲ್ಲ, ನಮ್ಮಿಂದ ಅವ್ರ್ ಏನನ್ನೂ ಬಯಸ್ಲಿಲ್ಲ; ಸುಸೂತ್ರವಾಗಿ ಎಲ್ಲವನ್ನು ನಡಿಸ್ಕೊಟ್ರು. ಬೇಕಾದ್ರೆ ಈಗ್ಲೂ ಟಿ.ವಿ. ಮೇಲಿಟ್ಟಿದ್ದ ಫೋಟೋ ನೋಡು; ಶೇಕರ-ಸವಿತಾ ಹೇಳ್ಮಾಡ್ಸಿದ್ದ್ ಜೋಡಿ! ನಮ್ಮ್ ಸುಮಂತ ಅಂತು ಮದ್ವೆಯಲ್ಲಿ ಫ್ರೆಂಡ್ಸ್ಗಳ್ನ ಸೇರಿಸ್ಕೊಂಡು ಪಟ್-ಪಟ ಅಂತ ಎಷ್ಟೋ ಕೆಲ್ಸಗಳ್ನ ಸುಲಭವಾಗಿ ಮಾಡ್ಮುಗಿಸ್ಬಿಟ್ಟ! ಆದ್ರೆ ರಿಸೆಪ್ಷನಲ್ಲಿ ಮಾತ್ರ ಸ್ಟೇಜ್ ಬಿಟ್ಟ್ ಕೆಳಗ್ ಬರ್ತಿರ್ಲಿಲ್ಲ; ಥೇಟ್ ಅವ್ರ್ ಅಪ್ಪನ ಹಾಗೆ, ಸೂಟ್ ಹಾಕ್ಕೊಂಡು ಫೋಟೋ ತೆಗಿಸ್ಕೊಳೊ ಹುಚ್ಚು

ಸವಿತಾ ಮದ್ವೆ ಆದ್ಮೇಲು ಕೆಲ್ಸಕ್ಕ್ ಹೋಗ್ತಾಯಿದ್ಲು. ಶೇಕರ-ಸವಿತಾ ಇಬ್ರು ಮಲ್ಟಿ ನ್ಯಾಷಿನಲ್ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ರು. ಅವ್ರದ್ ಒಂತರ ವಿಚಿತ್ರ ಜೀವ್ನ. ಕೂತ್ ಮಾತಾಡಕ್ಕೆ ಟೈಮ್ ಇರಲ್ಲ ಆದ್ರೆ ಬ್ಯಾಂಕ್ ಸಾಲ, ಸ್ಟಾಕ್ ಮಾರ್ಕೆಟು, ರಿಯಲ್ ಎಸ್ಟೇಟು... ಇವೆಲ್ಲದರ ಬಗ್ಗೆ ಚೆನ್ನಾಗ್ ತಿಳ್ಕೊಂಡಿರ್ತಾರೆ. ಮದ್ವೆಗೆ ಮುಂಚೆನೇ ಕಾರ್ ತೊಗೊಳೋದು, ಮಕ್ಕಳ ಮುಂಚೆನೇ ಮೊದ್ಲು ಸ್ಕೂಲ್ ಹುಡ್ಕಿ ಅದರ್ ಹತ್ರನೆ ಇರೊ ಅಪಾರ್ಟ್ಮೆಂಟ್ ಕೊಂಡ್ಕೊಳೋದು- ಇವೆಲ್ಲ ಇತ್ತೀಚಿಗೆ ಬೆಂಗಳೂರಲ್ಲಿ ಮಾಮೂಲಾಗ್ಹೋಗಿದೆ

ಸುಮಂತ ಇಂಜಿನಿಯರಿಂಗ್ ಮುಗಿಸಿದ್ ತಕ್ಷಣ ಕೆಲಸಕ್ಕ್ ಸೇರ್ಕೊಂಡ. ಸವಿತಾ ಕೂಡ ಎಷ್ಟ್ ಹೇಳಿದ್ರೂ ಕೇಳಿಲ್ಲ, ಅದೇನೊ ಎಕ್ಸ್ಪೀರಿಯನ್ಸ್ ತೊಗೊಂಡ್ ಮೇಲೆ ಮಾಸ್ಟರ್ಸ್ ಮಾಡ್ಬೇಕು ಅಂತ ಅಂದ್ಕೊಂಡಿದ್ದ. ಏಕ್ಸ್ಪೆರಿಯನ್ಸ್ ತೊಗೊಳೊ ನೆಪದಲ್ಲಿ ಪಾಪ ವಣಗ್ಹೋದ. ಅವನ್ 6:15ಗೆ ಆಫಿಸ್ ಬಸ್ ಹಿಡಿದ್ರೆ ರಾತ್ರಿ ಸುಸ್ತಾಗಿ ಮನೆಗೆ ಬರೌನು. ಕೆಲಸದ್ ಟೆಂಶನ್ನಿಂದ ನಮ್ಮೆಲ್ಲರ ಮೇಲಲ್ಲ ವಿನಾಕಾರಣ ಕೂಗಾಡೌನು. ನನಗಂತೂ ಅವನ್ ಹತ್ರ ಏನ್ ಮಾತಾಡ್ಬೇಕು ಏನ್ ಮಾತಾಡ್ಬಾರ್ದು ಅಂತ ತಿಳ್ಕೊಳಕ್ಕೆ ಆಗ್ತಾಯಿರ್ಲಿಲ್ಲ

ನಂಗೆ ರಿಟೈರ್ ಆಗಿ ಬೋರ್ ಆಗೋ ಅಷ್ಟ್ರಲ್ಲಿ ಸವಿತಾ ಬಾಣಂತನಕ್ಕೆ ಅಂತ ಬಂದ್ಲು. ನನ್ನ್ ಪ್ರಕಾರ ಜೀವನ್ದಲ್ಲಿ ನಾವು ಅಪ್ಪ ಆಗ್ತೀವೋ-ಬಿಡ್ತೀವೋ, ತಾತ ಅಂತು ಆಗ್ಲೇ ಬೇಕು! ಎಲ್ಲ ಕತೆಗಳ್ನೂ ಪದೇ-ಪದೇ ಸಂಕ್ಷಿಪ್ತವಾಗಿ ಹೇಳಕ್ಕೆ ಪುರ್ಸ್ಹೊತ್ತು ಇರತ್ತೆ, ಆದ್ರೆ ಯಾವ್ದೇ ರೀತಿಯ ಆರ್ಥಿಕ ಹೊಣೆಗಳ ಚಿಂತೆ ಇರಲ್ಲ. ಅವೆಲ್ಲ ಮಗಳು-ಅಳಿಯಂದರ ಡಿಪರ್ಟ್ಮೆಂಟು. ನನ್ದೇನಿದ್ರು ವಾಕಿಂಗು-ಟಾಕಿಂಗು! ನನಗೆ ಕಾಗೆ-ಗೂಬೆ ಕಥೆಗಳಾಗ್ಲಿ, ಅಥವ ರಾಜ-ರಾಣಿ ಕಥೆಗಳಾಗ್ಲಿ ಗೊತ್ತಿರ್ಲಿಲ್ಲ; ಎಲ್ಲ ಒಂದೊಂದಾಗಾಗಿ ನಾನು ಮೊಮ್ಮಗನ ಜೊತೆ ಕಲಿಯಕ್ಕೆ ಶುರು ಮಾಡ್ದೆ

ಅಷ್ಟೊಂದು ಮಾತಾಡಿಸ್ತಿರ್ಲಿಲ್ಲವಾದ್ರು ಸುಮಂತ ಕಣ್ಣ್ಮುಂದೆ ಓಡಾಡ್ಕೊಂಡು ಇದ್ದ. ಮಾಸ್ಟರ್ ಡಿಗ್ರಿ ಮುಗಿಸ್ಕೊಂಡು ಸಿಂಗಪೂರಿಗೆ ಕೆಲಸಕ್ಕೆ ಅಂತ ಅವ್ನ್ ಹೊರಟಾಗ ನಂಗೆ ತುಂಬ ದುಃಖ ಆಯ್ತು, ಯಾರ್ ಮುಂದೇನು ತೊರಿಸ್ಕೊಳ್ಳಿಲ್ಲ ಅಷ್ಟೆ. ಪ್ರೀತುನ ಕೂಡ ಸ್ಕೂಲಿಗೆ ಹಾಕಿದ್ರು; ಅದಿಕ್ಕಂತು ಪಾಪ ಅದೇನೇನೋ ಅರ್ಥವಿಲ್ಲದ ಪ್ರಾಜೆಕ್ಟ್ಸ್ ಕೊಟ್ಟು-ಕೊಟ್ಟು ಭಾನುವಾರಾನೂ ಬಿಜಿಯಾಗಿ ಇಡ್ತಾಯಿದ್ರು. ಮನೆ ಬಿಕೋ ಆಯ್ತು ಅಂದ್ರೆ ಮಕ್ಕಳೆಲ್ಲ ಸೆಟ್ಟಲ್ ಆಗಿದ್ದಾರೆ ಅಂತ ಅರ್ಥ ಅಲ್ವ?
ಅಟ್ಲೀಸ್ಟ್ ಆಗ ನಾನ್ ನಿನ್ನ್ ಆರೋಗ್ಯದ ಕಡೆ ಗಮನ ಕೊಡ್ಬೊಹೊದಾಗಿತ್ತು ಆದ್ರೆ ನಾನ್ ಟ್ರಿಪ್ಗಳ ಪ್ಲಾನ್ಸ್ ಮಾಡಕ್ಕೆ ಶುರುಮಾಡಿದೆ. ಜ್ಞಾಪಕ ಇದ್ಯ? ಅಮ್ಮ ತೀರ್ಕೊಂಡ್ ಮೂರ್ವರ್ಷ ಆದ್ಮೇಲೆ ನಾವು ಶೃಂಗೇರಿ-ಮುರುಡೇಷ್ವರಕ್ಕೆ ಹೋಗಿದ್ವಿ; ಆಮೇಲೆ ಎಲ್ಲೂ ಹೋಗೊ ಸಂಧರ್ಬವೇ ಕುದ್ಬಂದಿರ್ಲಿಲ್ಲ. ಅದಿಕ್ಕೆ ನನ್ನ್ ಲಿಸ್ಟಲ್ಲಿ ಮೊದಲನೆಯ ಟ್ರಿಪ್ಪನ್ನ ತಿರ್ಗ ಶೃಂಗೇರಿ ಅಂತ ಬರ್ಕೊಂಡೆ. ಅಷ್ಟೆ ಅಲ್ಲ ಕಾಶ್ಮೀರ, ಕನ್ಯಾಕುಮಾರಿ, ಗುಜರಾತು-ರಾಜಸ್ಥಾನ ಹೀಗೆ ಎಲ್ಲಾ ಮೋಲೆಗಳ್ನು ಲಿಸ್ಟಲ್ಲಿ ಬರೀಲಿಕ್ಕ್ ಶುರು ಮಾಡ್ದೆ. ಸುಮಂತ ಬೇರೆ ಸಿಂಗಪೋರಿಗೆ ಒಂದ್ ಪ್ಲಾನ್ಮಾಡಿ ಅಂತ ಹೇಳ್ತಿದ್ದ. ಆದ್ರೆ ಮುರುಡೇಷ್ವರದಲ್ಲಿ ಓಡಾಡಿದಾಗ ಗೊತ್ತಾಯ್ತು ನೀನ್ ಹೇಳ್ಕೊಳೋಕ್ಕಿಂತ ಜಾಸ್ತಿ ಮಂಡಿ ನೋವು ನಿಂಗಿದೆ ಅಂತ

ನನ್ನನ್ನ ಕ್ಷಮಿಸು ಸುಶೀಲ, ಇಷ್ಟು ವರ್ಷಗಳು ನಿನ್ನ ಆರೋಗ್ಯದ ಬಗ್ಗೆ ಹಲವಾರು ಬಾರಿ ಟೀಕೆ ಮಾಡಿದ್ದೆ ವಿನಃ ಯಾವಾತ್ತು ಅದರ್ಬಗ್ಗೆ ಗಂಭೀರವಾಗಿ ಯೋಚನೆ ಮಾಡೇ ಇರ್ಲಿಲ್ಲ! ಅದಿಕ್ಕೆ ಎಲ್ಲ ಟ್ರಿಪ್ಗಳ್ನು ಕ್ಯಾನ್ಸಲ್ ಮಾಡಿ ಜಿಂದಾಲ್ ಅಲ್ಲಿ ಸೇರ್ಕೊಂಡಿದ್ದು. ನಂಗೊತ್ತು ನೀನ್ ಒಬ್ಳೆ ಎಲ್ಲೂ ಹೋಗಲ್ಲ ಅಂತ, ಅದಿಕ್ಕೆ ನಿನ್ನ ಜೊತೆಗೆ ನಾನು ಕೂಡ ಅಡ್ಮಿಟ್ಟಾದೆ. ನಿನಗಂತೂ ಮಂಡಿ ನೋವು ಎಷ್ಟ್ಮಟ್ಟಿಗೆ ಕಡಿಮೆಯಾಯ್ತೋ ಗೊತ್ತಿಲ್ಲ; ಆದ್ರೆ ನಂಗಂತೂ ಒಳ್ಳೆ ಮಸ್ಸಾಜ್ ಸಿಗ್ತು! ನಿನ್ನ್ ಮೈಭಾರ ಸ್ವಲ್ಪ ಕಡಿಮೆ ಆದ್ಮೇಲೆ ಪ್ರತಿದಿನ ವಾಕಿಂಗ್ ಕರ್ಕೊಂಡ್ ಹೋಗ್ಬೇಕು, ಪ್ರತಿ ರಾತ್ರಿ ನಿನ್ನ ಮಂಡಿ ನೀವ್ ಬೇಕು, ಅನ್ನ ನಿಲ್ಸಿ ಬರಿ ಚಪಾತಿ-ತರಕಾರಿ ತಿನ್ನಕ್ಕೆ ಶುರುಮಾಡಬೇಕು ಅಂತೆಲ್ಲ ಅಂದ್ಕೊಂಡಿದ್ದೆ, ಅಷ್ಟ್ರಲ್ಲಿ ಧಿಡೀರ್ ಅಂತ ನಡುರಾತ್ರಿ ಸವಿತಾ-ಪ್ರೀತಂ ಮನೇಗ್ ಬಂದ್ರು!

ಮಗಳು ಮನೇಗೆ ಬರೋದು ಖುಷಿನೇ ಆದ್ರೆ ಅವಳು ಬಂದ ಕಾರಣ ಇಷ್ಟ ಆಗ್ಲಿಲ್ಲ. ಕಾರ್ಣ ಏನೇ ಇರ್ಲಿ ಹೊಂದಾಣಿಕೆ ಇಂದ ಅನುಸರ್ಸ್ಕೊಂಡ್ ಬದುಕ್ಬೇಕು. "ಅವನ್ ಅಲ್ದಿದ್ರೆ ನಾನ್ ಮದ್ವೆನೇ ಆಗಲ್ಲ" ಅಂತ ಹಟ ಹಿಡಿದೌಳು ಈಗ "ಅವನ್ ಕಂಡ್ರೆ ನಂಗ್ ಅಸಹ್ಯ" ಅಂದ್ರೆ ಏನ್ ಅರ್ಥ? ಶೇಕರ ತಪ್ಪ್ಮಾಡಿದ್ದಾನೋ ಇಲ್ವೋ ಗೊತ್ತಿಲ್ಲ, ಒಂದ್ ಪಕ್ಷ ತಪ್ಪ್ ಮಾಡಿದ್ರುವೆ ರೀತಿ ಧಿಡೀರ್ ಅಂತ ಅವ್ನ್ ಬಿಟ್ಬರೋದಲ್ಲ. ಇವರಿಬ್ರು ಸೂಕ್ಷ್ಮವಾಗಿ ಕೂತು ಮಾತಾಡ್ಬೇಕು. ಇವರಿಬ್ಬರ ಕಚ್ಚಾಟದಲ್ಲಿ ಪಾಪ ಕೂಸ್ ಗತಿ ಏನು? "ಅವನು ಹಾಗ್ ಮಾಡಿದ್ರೆ .ಕೆ, ಆದ್ರೆ ನಾನ್ ಏನಾದ್ರೂ ಹಾಗ್ ಮಾಡಿದ್ರೆ ತಪ್ಪಾಗತ್ತಾ? ಅವನಿಗೊಂದ್ ರೂಲ್ ನನಿಗೊಂದ್ ರೂಲಾ?" ಅಂತೆಲ್ಲ ಕೇಳ್ತಾಳೆ, ಸಂಸಾರ ಅಂದ್ರೆ ಏನ್ ಕಾಂಪಿಟಿಶನ್ ಅಂದ್ಕೊಂಡ್ ಬಿಟ್ಟಿದ್ದಾಳ ಇವ್ಳು? ದರಿದ್ರ ಇಂಟರ್ನೆಟ್ಟು, ಸುಡುಗಾಡು ಟಿ.ವಿ, ಸಿನೆಮಾಗಳು ಇಂಥಾವೆ ಹೇಳ್ಕೊಡೋದು. ಈಕ್ವಲ್ಲು-ಇಂಡಿಪೆಂಡೆಂಟು ಅನ್ನೋ ನೆಪದಲ್ಲಿ ಸಂಸಾರ ಮುರಿಯೊ ಕೆಲಸ ಮಾಡ್ತಾಯಿವೆ. ಅಲ್ಲಿಂದ ಸುಮಂತ ಬೇರೆ ಫೋನ್ಮಾಡಿ ನನಗೇ ಅಡ್ವಯ್ಸ್ ಮಾಡ್ತಾನೆ; ಸವಿತಾಳಿಗೆ ನಾನ್ ಏನು ಅಂಬಾರದಂತೆ, "ಡೈವರ್ಸ್ ಕೊಟ್ರೆ ಕೊಡ್ಲಿ" ಅಂತೆಲ್ಲ ಅಸಹ್ಯವಾಗಿ ಮಾತಾಡ್ತಾನೆ. ಬೀಗರಂತು ನಂಗೆ ಫೋನ್ ಮಾಡಿ "ಚಿಂತೆ ಮಾಡ್ಬೇಡಿ, ಎಲ್ಲ ಒಳ್ಳೆದಾಗತ್ತೆ" ಅಂತಾರೆ; ಆದ್ರೆ ಶೇಕರನ ಜೊತೆ ಅವರ್ಗೂ ಮಾತಾಡಕ್ಕೆ ಆಗ್ತಾಯಿಲ್ವಂತೆ. ಏನ್ ಕರ್ಮನೊ ಏನೊ ... 

ಸವಿತಾ ಮನೆಗೆ ಬಂದು ಮೂರ್ ತಿಂಗಳಾಯ್ತು, ಸ್ಮಷಾಣ ವಾತಾವರ್ಣ ಮಾಡಿಟ್ಟಿದ್ದಾಳೆ! ಏನ್ ಮಾತಾಡಕ್ಕು ಆಗಲ್ಲ. ಮೊನ್ನೆ ನಿಂಗೂ ಅಂದ್ಲಲ್ಲ "ಒಮ್ಮೆ ಶೇಕರನಿಗೆ ಫ಼ೊನ್ಮಾಡಮ್ಮ" ಅಂತಂದ್ರೆ "ಪ್ರೀತುನ ನೋಡ್ಕೊಳಕ್ಕ್ ಆಗಲ್ಲ ಅಂದ್ರೆ ಹೇಳಿ, ಹಾಸ್ಟಲ್ ವ್ಯವಸ್ತೆ ಮಾಡ್ತೀನಿ" ಅಂತಾಳೆ. ಒಬ್ಬೊಬ್ಳೆ ಬಾಗಿಲ್ಹಾಕ್ಕೊಂಡು ಅಳ್ತಾಯಿರ್ತಾಳೆ. ಮೊನ್ನೆ ಇವಳ್ ಸ್ನೇಹಿತೆ ಪವಿತ್ರ ಬಂದಿದ್ದ್ಲಲ್ಲ ಅವಳ್ ಅಟ್ಲೀಸ್ಟ್ ಸವಿತಾಗೆ ಏನಾದ್ರೂ ಬುದ್ಧಿ ಹೇಳ್ತಾಳೆ ಅಂದ್ರೆ ಅವಳ್ ನಮ್ಗೇ ಬುದ್ಧಿ ಹೇಳಿ ಹೋದ್ಲು! ಇವರಿಗೆಲ್ಲ ತಮ್ಮದನ್ನೇ ನಡಿಸ್ಕೊಳ್ಬೇಕು ಅಂತ ಆಸೆ ಇದೆ ಹೊರ್ತು ನೆಮ್ಮದಿಯಾಗಿ ಬದುಕಬೇಕಂತಲ್ಲ. ನಮಗೂ ಇವಳ್ಗೆ ಹೇಳಿ-ಹೇಳಿ ಸಾಕಾಯ್ತು. ಅವಳೇನಾದ್ರು ಮಾಡ್ಕೊಂಡ್ಬಿಡ್ತಾಳೆ ಅಂತ ಭಯದಲ್ಲಿ ನಾವ್ ಎಷ್ಟ್ ದಿನ ಬದುಕೋದು? ಅವರವರ ಹಣೆ ಬರಹ ಅಂತ ಅಂದ್ಕೊಂಡು ಸುಮ್ನೀರ್ಬೇಕು ಅಷ್ಟೆ. ಪ್ರತಿದಿನ ಟೇಬಲ್ ಮೇಲೆ ಆಟೋ ಚಾರ್ಜ್ ಇಟ್ಹೋಗ್ತಾಳೆ; ಅವಳ್ ದುಡ್ಡ್ ಇಡ್ಲಿ-ಬಿಡ್ಲಿ ಪ್ರೀತುನ ನಮ್ಮ್ ಕೈಲಾದಷ್ಟ್ ಮಟ್ಟಿಗೆ ನೋಡ್ಕೊಳೋಣ, ಆದ್ರೆ ಅವನ್ನನ್ನಾಗಲಿ ಅಥ್ವ ಅವಳನ್ನಾಗಲಿ ನೋಡ್ಕೊಳೊದೇ ನಮ್ಮ್ ಜೀವ್ನ ಅಲ್ಲ

ನೀನಂತು ಬೇರೆಯವರಿಗೆ ಮಾಡಿ-ಮಾಡಿ ಸವೆದ್ಹೊಗಿದ್ಯ. ಅಜ್ಜ ಆಯ್ತು, ನಾನ್ ಆಯ್ತು, ನಮ್ಮಮ್ಮ ಆಯ್ತು, ಮಕ್ಕಳಾಯ್ತು, ಈಗ ಮೊಮ್ಮಗನೂ ಆಯ್ತು; ತಿರ್ಗ ಇನ್ನೆಷ್ಟ್ ಮಾಡ್ತ್ಯ? ಒಂದ್ ಸರಿಯಾಗ್ ತಿಳ್ಕೊ, ' ಇಳಿವಯಸ್ಸಿನಲ್ಲಿ ನನಗಾಗ್ಬರೋದು ನೀನು, ನಿನಗಾಗ್ಬರೋದು ನಾನು'! ... ಗೊತ್ತು ನನ್ನ ಒಂದು ವಾಕ್ಯಕ್ಕೇ ನಿನ್ನ ನಾನಾರೀತಿ ಪ್ರತ್ಯುತ್ತರಗಳ್ನ-ಪ್ರಷ್ನೆಗಳ್ನ  ಓಹಿಸಬಲ್ಲೆ. ವಾದ-ವಿವಾದಗಳನ್ನೆಲ್ಲ ವಾಕ್ ಮಾಡ್ತ ಮಾತಾಡೋಣ. ಇವತ್ತು ವೆದರ್ ಚೆನ್ನಾಗಿದೆ, ಬೇಗ ಬಾ ಕಾಯ್ತಾಯಿರ್ತೀನಿ. ನಾನ್ ನಿನ್ನ ಡಾಕ್ಟರ್ಗೆ ಮಾತ್ಕೊಟ್ಟಿದ್ದೀನಿ; ಎರಡ್ ತಿಂಗಳಲ್ಲಿ ಕೆ.ಜಿ. ಕಡಿಮೆ ಮಾಡಿಸ್ತೀನಿ ಅಂತ. ಅಂದ್ಹಾಗೆ ಈಗಾಗ್ಲೇ ನೀನು ಸ್ಟೌವ್ ಮೇಲಿಟ್ಟಿರೊ ಚಪಾತಿ-ಪಲ್ಯ ಟೆಸ್ಟ್ ಮಾಡಿದ್ಯ ಅಂತ ಅಂದ್ಕೊಂಡಿದ್ದೀನಿ; ಹೌದು- ನೀನ್ ಮಾಡೊತರ ರುಚಿ ಇಲ್ಲ ಬಟ್ ಡೋಂಟ್ ವರಿ, ಇಂಪ್ರೂವ್ ಮಾಡ್ಕೊಂಡ್ತೀನಿ!

ಇಂತಿ ನಿನ್ನ ಪ್ರೀತಿಯ 
-ಏನು ಅಂದ್ರೆ 

-ಶ್ರೀವತ್ಸ ಪ್ರಹಲ್ಲಾದ

1 comment:

  1. Hi maga,
    Nithya jeevanadha kathey yanna ninna sarala baravanigey yalli chennagi baredhihiya. Hagu ending kuda chennagidhey.

    Inthi ninna snehitha,
    Praveen 😀

    ReplyDelete